ರೋಣ ತಾಲೂಕಿನ ಸವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಾಪೂರ ಗ್ರಾಮದಲ್ಲಿ ನರೇಗಾ ಅಡಿ ನಡೆಯುತ್ತಿರುವ ಕಾಮಗಾರಿ ವೇಳೆ ತಾಪಂ ಇಒ ಚಂದ್ರಶೇಖರ ಕಂದಕೂರ ಗುದ್ದಲಿ ಹಿಡಿದು ಕೆಲಸ ಮಾಡಿದರು. ಪಿಡಿಒ ಶಿವನಗೌಡ ಮೆಣಸಗಿ, ಇತರರು ಇದ್ದರು. 
ಗದಗ

ನಿಗದಿತ ಅಳತೆಗೆ ತಕ್ಕಂತೆ ಕೆಲಸ ಮಾಡಲೇಬೇಕು narega work

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಚಂದ್ರಶೇಖರ ಕಂದಕೂರ ಸೂಚನೆ
  • ಹೊನ್ನಾಪೂರದಲ್ಲಿ ಕಾಮಗಾರಿ ಪರಿಶೀಲನೆ
ರೋಣ: ತಾಲೂಕಿನ ಸವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಾಪೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ನಡೆಯುತ್ತಿರುವ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಮಗಾರಿ ಸ್ಥಳದಲ್ಲಿ ಕೆಲಸದ ಪ್ರಗತಿ, ಗುಣಮಟ್ಟ ಹಾಗೂ ಕೂಲಿಕಾರರಿಗೆ ಕಲ್ಪಿಸಲಾಗುತ್ತಿರುವ ಸೌಲಭ್ಯಗಳ ಕುರಿತು ತಪಾಸಣೆ ನಡೆಸಿದ ಅವರು, ಸರ್ಕಾರದ ಮಾರ್ಗಸೂಚಿ ಅನುಸಾರ ಕೂಲಿಕಾರರು ಕಡ್ಡಾಯವಾಗಿ ಅಳತೆಗೆ ತಕ್ಕಂತೆ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಬೆಳಗ್ಗೆ ಬೇಗ ಕೆಲಸಕ್ಕೆ ಹಾಜರಾಗಿ ಮಧ್ಯಾಹ್ನದೊಳಗೆ ಕೆಲಸ ಮುಗಿಸಿಕೊಳ್ಳುವಂತೆ ಸಲಹೆ ನೀಡಿದರು. 
ಈ ವೇಳೆ ಕೂಲಿಕಾರರು, ಗ್ರಾಮದಲ್ಲಿ ನಿರಂತರವಾಗಿ ನರೇಗಾ ಕಾಮಗಾರಿ ಹಮ್ಮಿಕೊಂಡು ಉದ್ಯೋಗಾವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯ ನಿರ್ವಾಹಕ ಅಧಿಕಾರಿ, ಗುಣಮಟ್ಟದ ಹಾಗೂ ನಿಯಮಾನುಸಾರ ಕೆಲಸ ಮಾಡಿದಲ್ಲಿ ನಿರಂತರವಾಗಿ ಕೆಲಸ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪರಿಶೀಲನೆ ಸಂದರ್ಭದಲ್ಲಿ ಕೂಲಿಕಾರರು ಹಾಗೂ ಸಿಬ್ಬಂದಿಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಲಾಯಿತು. ಪ್ರತಿದಿನ ಕಡ್ಡಾಯವಾಗಿ ಎರಡು ಬಾರಿ ಎನ್‌ಎಂಎಂಎಸ್ ಆ್ಯಪ್ ಮೂಲಕ ಹಾಜರಾತಿ ದಾಖಲಿಸಬೇಕು. ಕಾಯಕ ಬಂಧುಗಳು ತಮ್ಮ ವ್ಯಾಪ್ತಿಯ ಕೂಲಿಕಾರರಿಗೆ ಪ್ರತಿದಿನ ಕೆಲಸದ ಅಳತೆಯ ಕುರಿತು ಮಾಹಿತಿ ನೀಡಿ, ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಲು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಬದು ನಿರ್ಮಾಣ ಕಾಮಗಾರಿಗಳು ಗ್ರಾಮೀಣ ಭಾಗದಲ್ಲಿ ನೀರು ಸಂರಕ್ಷಣೆ, ಮಣ್ಣಿನ ಸದ್ಬಳಕೆ ಹಾಗೂ ರೈತರ ಭೂಮಿಯ ಅಭಿವೃದ್ಧಿಗೆ ಸಹಕಾರಿಯಾಗುತ್ತಿದ್ದು, ಗ್ರಾಮಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು. ಐಇಸಿ ಕೋ ಆರ್ಡಿನೇಟರ್ ಮಂಜುನಾಥ ಶಿರಸಂಗಿ, ಗ್ರಾಮ ಕಾಯಕ ಮಿತ್ರ ಚಾಂದ್‌ಬಿ ಕರ್ನಾಚಿ ಇದ್ದರು.
ಗುದ್ದಲಿ ಹಿಡಿದ ಇಒ
ನರೇಗಾ ಕಾಮಗಾರಿಯಡಿ ಸವಡಿ ಗ್ರಾಪಂ ವ್ಯಾಪ್ತಿಯ ಹೊನ್ನಾಪುರದಲ್ಲಿ ಆರಂಭವಾಗಿರುವ ಬದು ನಿರ್ಮಾಣ ಕಾಮಗಾರಿ ವೇಳೆ ತಾಪಂ ಇಒ ಚಂದ್ರಶೇಖರ ಕಂದಕೂರ ಸ್ವತಃ ಗುದ್ದಲಿ ಹಿಡಿದು ಬದು ನಿರ್ಮಾಣದಲ್ಲಿ ತೊಡಗಿ ಕೂಲಿಕಾರರನ್ನು ಹುರಿದುಂಬಿಸಿದರು.