ರೋಣದ ಮುದೇನಗುಡಿ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್.
- ಸರ್ಕಾರಿ ಪಾಲಿಟೆಕ್ನಿಕ್ ಆರಂಭ
- ವಿವಿಧ ಕೋರ್ಸ್ ಲಭ್ಯ
ರೋಣ: ಎಸ್‌ಎಸ್‌ಎಲ್‌ಸಿ ಮುಗಿದ ತಕ್ಷಣ ಹೆಚ್ಚಿನ ಶಿಕ್ಷಣ ಕಲಿಯಲು ಆರ್ಥಿಕವಾಗಿ ಸದೃಢರಾದ ಈ ಭಾಗದವರು ದೂರದ ಊರಿಗೆ ತೆರಳುತ್ತಿದ್ದರು. ಆದರೆ, ಬಡ ಕುಟುಂಬದ ಮಕ್ಕಳು ಉನ್ನತ ಶಿಕ್ಷಣದ ಕನಸನ್ನು ಚಿವುಟಿ ಹಾಕಿ ಅನಿವಾರ್ಯವಾಗಿ ಪಿಯುಸಿ ತರಗತಿಗೆ ಪ್ರವೇಶ ಪಡೆದುಕೊಳ್ಳುತ್ತಿದ್ದರು.
ರೋಣ ಭಾಗದ ಬಡ ಮಕ್ಕಳಿಗೂ ಅನುಕೂಲವಾಗಲಿ ಎಂದು ಶಾಸಕ ಜಿ.ಎಸ್. ಪಾಟೀಲ, 2017-18ರಲ್ಲಿ ಅಂದು ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರಿಗೆ ದುಂಬಾಲು ಬಿದ್ದು ರೋಣ ಪಟ್ಟಣಕ್ಕೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ಮಂಜೂರು ಮಾಡಿಸಿದ್ದರು.
ಆದರೆ, 2018ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೋಣದಲ್ಲಿದ್ದ ಸರ್ಕಾರಿ ಪಾಲಿಟೆಕ್ನಿಕ್‌ಅನ್ನು ಬೇರೆ ಕಡೆಗೆ ವರ್ಗಾಯಿಸಲಾಗಿತ್ತು. ಇದರಿಂದ ಈ ಭಾಗದ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಕನಸು ಹಾಗೆಯೇ ಉಳಿಯುವಂತಾಯಿತು.
2021ರಲ್ಲಿಯೇ ಪಾಲಿಟೆಕ್ನಿಕ್ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಬಳಕೆಯಾಗದೆ ಪಾಳು ಬಿದ್ದಿತ್ತು. ಶಾಸಕ ಜಿ.ಎಸ್. ಪಾಟೀಲ, ಪ್ರಸಕ್ತ ವರ್ಷದಿಂದ ಇಲ್ಲಿ ಪಾಲಿಟೆಕ್ನಿಕ್ ಕಾಲೇಜ್ ಆರಂಭಕ್ಕೆ ಮಂಜೂರಾತಿ ತಂದು ಈ ಭಾಗದ ಮಕ್ಕಳಿಗೆ ಊರಲ್ಲೇ ತಾಂತ್ರಿಕ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದ್ದಾರೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ
ಕಂಪ್ಯೂಟರ್ ಸೈನ್ಸ್, ಇಂಜಿನಿಯರಿಂಗ್
ಇಲೆಕ್ಟ್ರಾನಿಕ್ಸ್, ಕಮ್ಯುನಿಕೇಶನ್
ಸುಸಜ್ಜಿತ ಕಟ್ಟಡ, ಸುಂದರ ಕ್ಯಾಂಪಸ್
ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ, ಗ್ರಂಥಾಲಯ
"
ಸರ್ಕಾರದ ಮೇಲೆ ಒತ್ತಡ ತಂದು 2017- 18ರಲ್ಲಿಯೇ ರೋಣಕ್ಕೆ ಪಾಲಿಟೆಕ್ನಿಕ್ ಕಾಲೇಜ್ ಮಂಜೂರು ಮಾಡಿಸಿದ್ದೆ. ಆದರೆ, ನಂತರ ಬಂದ ಜನಪ್ರತಿನಿಧಿಗಳು ಇಲ್ಲಿದ್ದ ಕಾಲೇಜನ್ನು ಬೇರೆಡೆ ಸ್ಥಳಾಂತರಿಸಿಕೊಂಡು ಹೋದ ಪರಿಣಾಮ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಿದ್ದರು. ಈಗ ಮತ್ತೆ ಪಾಲಿಟೆಕ್ನಿಕ್ ಕಾಲೇಜ್ ಆರಂಭಕ್ಕೆ ಮಂಜೂರಾತಿ ತಂದಿದ್ದೇನೆ. ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು. ಜಿ.ಎಸ್. ಪಾಟೀಲ, ಶಾಸಕ
"
ರೋಣ, ಸುತ್ತಮುತ್ತಲಿನ ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.
ಮಹಾಂತೇಶ ಗುಡ್ಡಿನ, ಪ್ರಾಚಾರ್ಯ