cowpea ಲಕ್ಷ್ಮೇಶ್ವರದ ಸಮಗ್ರ ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಗದಗದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರನ್ನು ಬೇಟಿಯಾಗಿ ಗೋವಿನ ಜೋಳ ಖರೀದಿ ತ್ವರಿತಗೊಳಿಸಲು ಮನವಿ ಮಾಡಿದರು. ಮುತ್ತಣ್ಣ ನೀರಲಗಿ, ಸುರೇಶ, ಬಸಯ್ಯ ಪೂಜಾರ ಹಾಜರಿದ್ದರು.
ಲಕ್ಷ್ಮೇಶ್ವರ: ಸಮಗ್ರ ರೈತ ಹೋರಾಟ ಸಮಿತಿಯಿಂದ ಗುರುವಾರ ಗದಗ ನಗರದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಗೋವಿನ ಜೋಳ ಖರೀದಿ(cowpea) ಹಾಗೂ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸುವಂತೆ ಮನವಿ ಸಲ್ಲಿಸಲಾಯಿತು.
ಪಟ್ಟಣದಲ್ಲಿ ಗೋವಿನ ಜೋಳದ ಖರೀದಿ ಕೇಂದ್ರ ಸ್ಥಾಪನೆಗಾಗಿ ಅಹೋರಾತ್ರಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮಣಿದ ಸರ್ಕಾರವು ಖರೀದಿ ಕೇಂದ್ರವನ್ನು ಪ್ರಾರಂಭಿಸಿದೆ. ಆದರೆ ಸಮಸ್ಯೆ ಮುಂದುವರಿದಿದೆ ಎಂದು ಮನವರಿಕೆ ಮಾಡಿಕೊಡಲಾಯಿತು.
ಹೋರಾಟ ಸಮಿತಿ ಮುಖಂಡರಾದ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಪೂರ್ಣಾಜಿ ಖರಾಟೆ ಹಾಗೂ ನಾಗರಾಜ ಚಿಂಚಲಿ ಮಾತನಾಡಿ, ಖರೀದಿ ಕೇಂದ್ರ ಆರಂಭವಾದ ದಿನದಿಂದಲೇ ಖರೀದಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. ರೈತರಿಗೆ ತೀವ್ರ ತೊಂದರೆ ಉಂಟಾಗಿದೆ. ನೊಡಲ್ ಸೆಂಟರ್‌ನಲ್ಲಿ ಕೆಲವೊಂದು ದೋಷಗಳಿದ್ದು, ಅವುಗಳನ್ನು ಶೀಘ್ರವೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ದಿನಕ್ಕೆ ಕೇವಲ 10 ರೈತರಿಂದ ಮಾತ್ರ ಖರೀದಿ ನಡೆಯುತ್ತಿದೆ. ಗೋವಿನ ಜೋಳ ಬೆಳೆದ ಸಾವಿರಾರು ರೈತರ ಗತಿ ಏನಾಗಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಸಂಕಷ್ಟದಲ್ಲಿರುವ ರೈತರ ಬದುಕು ಇನ್ನಷ್ಟು ದುಸ್ತರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರ ಬಾಳು ಬೆಳಗುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಕೆಎಂಎಫ್‌ನವರು ಖರೀದಿಸುವ ಗೋವಿನಜೋಳವನ್ನು ಇಲ್ಲಿಯೇ ಖರೀದಿಸಿ ತೆಗೆದುಕೊಂಡು ಹೋಗುವಂತೆ ಆದೇಶ ಮಾಡಬೇಕು, ಇಲ್ಲದಿದ್ದಲ್ಲಿ ರೈತರಿಗೆ ಹೊರೆಯಾಗುತ್ತದೆ. ಸಮಸ್ಯೆಗಳನ್ನು ಆದಷ್ಟು ಶೀಘ್ರ ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಖರೀದಿ ವಿಳಂಬದಿಂದ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು, ಆದಷ್ಟು ಶೀಘ್ರ ಖರೀದಿ ಪ್ರಕ್ರಿಯೆ ತೀವ್ರಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು!