ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಕುಷ್ಟಗಿ-ಘಟಪ್ರಭಾ ನೂತನ ರೈಲು ಮಾರ್ಗದ ಸರ್ವೇ ಕಾರ್ಯ ನಡೆಸುವಂತೆ ಆಗ್ರಹಿಸಿ ರೈಲ್ವೆ railway ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.
ನರಗುಂದ: ಕುಷ್ಟಗಿ-ಘಟಪ್ರಭಾ ನೂತನ ರೈಲು ಮಾರ್ಗದ ಸರ್ವೇ ಕಾರ್ಯ ನಡೆಸುವಂತೆ ಆಗ್ರಹಿಸಿ ಕೇಂದ್ರ ರೈಲ್ವೆ railway ರಾಜ್ಯ ಸಚಿವ ವಿ.ಸೋಮಣ್ಣ, ಶಾಸಕ ಸಿ.ಸಿ. ಪಾಟೀಲ ಅವರಿಗೆ ದಿ.ಜಗನ್ನಾಥರಾವ್ ಜೋಶಿ ಹಾಗೂ ದಿ.ಎಫ್.ಎಂ. ಹಸಬಿ ರೈಲ್ವೆ ಹೋರಾಟ ಸಮಿತಿ ಸದಸ್ಯರು ಪಟ್ಟಣದಲ್ಲಿ ಶುಕ್ರವಾರ ಮನವಿ ಸಲ್ಲಿಸಿದರು.
ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದಿ, ಉಪಾಧ್ಯಕ್ಷ ರಾಘವೇಂದ್ರ ಗುಜಮಾಗಡಿ ಮಾತನಾಡಿ, ಹೊಸ ರೈಲು ಮಾರ್ಗದ ಕಾಮಗಾರಿ ಆರಂಭ ಹಾಗೂ ಹೊಳೆಆಲೂರು ರೈಲು ನಿಲ್ದಾಣದಲ್ಲಿ ಶಿರಡಿ, ಮುಂಬೈ ಮತ್ತು ವಾರಣಾಸಿ ಕಡೆಗೆ ಹೋಗುವ ವಿವಿಧ ರೈಲುಗಳ ನಿಲುಗಡೆ ಮಾಡುವುದರ ಕುರಿತು ಸಂಬಂಧಿಸಿದ ನಿರ್ದೇಶನಾಲಯಕ್ಕೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆ ಸಾಕಾರಗೊಳ್ಳುವ ಕನಸು ಇಮ್ಮಡಿಗೊಳಿಸಿದೆ.
ಈ ಪ್ರಸ್ತಾವಿತ ರೈಲು ಮಾರ್ಗವು ಅಂದಾಜು 250 ರಿಂದ 300 ಕಿ.ಮೀ. ಉದ್ದವಿದೆ. ರೈತರ ಹತ್ತಿ, ಗೋಧಿ, ಸೂರ್ಯಕಾಂತಿ, ಹೆಸರು, ಗೋವಿನಜೋಳ ಮುಂತಾದ ವಾಣಿಜ್ಯ ಬೆಳೆಗಳನ್ನು ಹತ್ತಿರದ ವಾಣಿಜ್ಯ ಕೇಂದ್ರಗಳಿಗೆ ಸಾಗಿಸಲು ನೂತನ ರೈಲ್ವೆ ಯೋಜನೆ ಸಹಾಯವಾಗುತ್ತದೆ.
ಉತ್ತರ ಕರ್ನಾಟಕ ಭಾಗದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಸಹಾಯವಾಗುತ್ತದೆ. ಈ ಮಹತ್ವದ ಯೋಜನೆ ಆದ್ಯತೆಯ ಮೇರೆಗೆ ತಕ್ಷಣ ಕೈಗೆತ್ತಿಕೊಂಡು ಬಹುದಿನಗಳ ಕನಸು ನನಸಾಗಿಸಬೇಕೆಂದು ಮನವಿ ಮಾಡಿದರು.
ಜಿ.ಆರ್.ಕದಂ, ಮಾರುತಿ ಭೋಸಲೆ, ಸೀಮಣ್ಣ ಗೊವೇಶ್ವರ. ಶಿವಪುತ್ರಪ್ಪ ಹುಂಬಿ, ಶಿವಪ್ಪ ಬೋಳಶೆಟ್ಟಿ, ವಾಸು ಜೋಗಣ್ಣವರ, ನಂದೀಶ ಮಠದ, ಮನೋಹರ ಹುಯಿಲಗೋಳ, ಎಸ್.ಆರ್.ಪಾಟೀಲ, ಚಂದ್ರು ದಂಡಿನ, ಉಮೇಶಗೌಡ ಪಾಟೀಲ ಉಪಸ್ಥಿತರಿದ್ದರು.