ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನಿರ್ಮಾಣಗೊಂಡ ಹಿರೇಮಠದ ಲೋಕಾರ್ಪಣೆ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿದರು. ಬೇನಾಳ ಹಿರೇಮಠದ ಸದಾಶಿವ ಶಿವಾಚಾರ್ಯರು, ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಇದ್ದರು. 
ಗದಗ

Religious awareness: ಧಾರ್ಮಿಕ ಮೌಲ್ಯ ಕಣ್ಮರೆಯಾದರೆ ಧರ್ಮ ಸಂಸ್ಕೃತಿ ನಾಶ

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ರೋಣ
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಕಣ್ಮರೆಯಾದರೆ ಧರ್ಮ ಸಂಸ್ಕೃತಿ ಉಳಿಯಲಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ಸೋಮವಾರ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನಿರ್ಮಾಣಗೊಂಡ ಹಿರೇಮಠದ ಉದ್ಘಾಟನೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನಲ್ಲಿ ಆತ್ಮಬಲ ಬೆಳೆಯಲು ಅಧ್ಯಾತ್ಮದ ಹಸಿವು ಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂಧುತ್ವದ ಆದರ್ಶ ಮೌಲ್ಯಗಳನ್ನು ಬೋಧಿಸಿದ್ದಾರೆ. ಇಂದು ನೂತನ ಕಟ್ಟಡ ನಿರ್ಮಾಣಗೊಂಡು ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸವಾಗಿದೆ ಇದಕ್ಕಾಗಿ ಶ್ರಮಿಸಿದ ಹಿರೇಮಠದ ಮಹೇಶ್ವರಸ್ವಾಮಿ ಪರಿವಾರದವರಿಗೂ ಹಾಗೂ ಸಹಕರಿಸಿ ಸೇವೆ ಮಾಡಿದ ಸಕಲ ಸದ್ಭಕ್ತರಿಗೆ ಶುಭ ಹಾರೈಸಿದರು.
ಬೇನಾಳ ಹಿರೇಮಠದ ಸದಾಶಿವ ಶಿವಾಚಾರ್ಯರು, ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು, ಯಲಬುರ್ಗಾ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಲಿಂಗಸುಗೂರಿನ ಮಾತಾ ಮಾಣಿಕ್ಕೇಶ್ವರಿ ಆಶ್ರಮದ ನಂದೀಶ್ವರಿ ಅಮ್ಮನವರು ಪಾಲ್ಗೊಂಡಿದ್ದರು. ಅಡ್ನೂರು-ರಾಜೂರ ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿದ್ದರು. ಬಂಡಿ ಹಿರೇಮಠದ ಪ್ರಕಾಶಯ್ಯ ಶಾಸ್ತ್ರಿಗಳು ಪುರಾಣ ಪ್ರವಚನ ನೀಡಿದರು. ಚಿಕ್ಕಮಗಳೂರು ಶ್ರೀದೇವಿ ಗುರುಕುಲದ ಡಾ. ಜಿ. ದಯಾನಂದ ಮೂರ್ತಿ ಶಾಸ್ತ್ರಿಗಳು ಪ್ರತಿಷ್ಠಾಪನೆಯ ವೈದಿಕ ಕಾರ್ಯ ನೆರವೇರಿಸಿದರು. ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.