ರೋಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಮರು ನಿರ್ಮಾಣ ಕಾರ್ಯಕ್ಕೆ ಸೋಮವಾರ ಶಾಸಕ ಜಿ.ಎಸ್. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಮಿಥುನ್ ಪಾಟೀಲ, ಬಸವರಾಜ ನವಲಗುಂದ, ಶಿವಣ್ಣ ನವಲಗುಂದ, ಪರಶುರಾಮ ಅಳಗವಾಡಿ, ವಿ.ಬಿ. ಸೋಮನಕಟ್ಟಿಮಠ, ಸುವರ್ಣಾ ಕ್ಷೀರಸಾಗರ, ಶ್ರೀನಿವಾಸಗೌಡ ಪಾಟೀಲ, ಲೀಲಾವತಿ ಚಿತ್ರಗಾರ, ಎಸ್.ವಿ. ಹಿರೇಮಠ ಇತರರಿದ್ದರು. 
ಗದಗ

ಮೂರು ದೇಗುಲಗಳ ಮರು ನಿರ್ಮಾಣ

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಎಸ್. ಪಾಟೀಲ ಭರವಸೆ
  • ರಾಮಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ಭೂಮಿಪೂಜೆ
ರೋಣ: ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. ಪಟ್ಟಣದಲ್ಲಿ 11, 12ನೇ ಶತಮಾನಗಳ ದೇಗುಲಗಳು ಹಾಗೂ ಪುಷ್ಕರಣೆಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ಮೂರು ಮಂದಿರಗಳನ್ನು ಮರು ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪ್ರವಾಸೋದ್ಯಮ ಇಲಾಖೆ, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಶ್ರಯದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಿಂದೆ ಸೂಡಿಯಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ಅಲ್ಲಿನ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿತ್ತು. ಈಗ ಸಿಎಸ್‌ಆರ್ ಅನುದಾನದಡಿ ಮತ್ತೆ 1.50 ಕೋಟಿ ರೂ. ವೆಚ್ಚದಲ್ಲಿ ಸೂಡಿಯಲ್ಲಿ ಬಾವಿ ಮರು ನಿರ್ಮಾಣ ಮಾಡಿದ್ದು, ಮಾ. 30ರಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.
ರೋಣ ನಗರದ ಸ್ವಚ್ಛತೆ ಹಾಗೂ ಕೆರೆ ಅಭಿವೃದ್ಧಿಗಾಗಿ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೆ. ಮತ್ತೆ ಕೆರೆ ಅಭಿವೃದ್ಧಿಗಾಗಿ ಮತ್ತೊಂದು ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಮತ್ತೆ 2 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೆ. ಈಗ ಮತ್ತೆ 1 ಕೋಟಿ ರೂ. ಬಿಡುಗಡೆಯಾಗಿದೆ. ಆ ಅನುದಾನದಲ್ಲಿ ಪಟ್ಟಣದ ಕೆರೆಯನ್ನು ಮಾದರಿ ಕೆರೆಯಾಗಿ ರೂಪಿಸಲಾಗುವುದು ಎಂದು ತಿಳಿಸಿದರು.
ಕಾರ್ಮಿಕರ ಮಕ್ಕಳ ವಸತಿ ಶಾಲೆಗಾಗಿ ಪುರಸಭೆ ವ್ಯಾಪ್ತಿಯ ಬಾಸಲಾಪುರ ರಸ್ತೆಯಲ್ಲಿ 6 ಎಕರೆ ಜಮೀನು ಗುರುತಿಸಲಾಗಿದೆ. ಅದಕ್ಕಾಗಿ 38 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಕೂಡ ಆಗಿದ್ದು, ಕಟ್ಟಡ ಕಾಮಗಾರಿ ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದರು.
ಖನಿಜ ಅಭಿವೃದ್ಧಿ ನಿಗಮದ ಸಿಎಸ್‌ಆರ್ ಅನುದಾನದಡಿ ಪಟ್ಟಣದಲ್ಲಿ ಎರಡು ಹೈಟೆಕ್ ಶೌಚಗೃಹಗಳ ನಿರ್ಮಾಣಕ್ಕೆ 40 ಲಕ್ಷ ರೂ. ಅನುದಾನ ಒದಗಿಸಲಾಗುವುದು ಎಂದರು.
ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಬಸವರಾಜ ನವಲಗುಂದ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ, ಟ್ರಸ್ಟ್ ಅಧ್ಯಕ್ಷ ಶಿವಣ್ಣ ನವಲಗುಂದ, ಪರಶುರಾಮ ಅಳಗವಾಡಿ, ವೀರಯ್ಯ ಸೋಮನಕಟ್ಟಿಮಠ, ಪುರಾತತ್ವ ಇಲಾಖೆ ಇಂಜಿನಿಯರ್, ಸುವರ್ಣಾ ಕ್ಷೀರಸಾಗರ, ಪ್ರವಾಸೋದ್ಯಮ ಇಲಾಖೆ ಶ್ರೀನಿವಾಸಗೌಡ ಪಾಟೀಲ, ಎಸ್.ವಿ. ಹಿರೇಮಠ, ಗುರುರಾಜ ಜೋಶಿ, ಅಸ್ಲಾಂ ಕೊಪ್ಪಳ, ಯಲ್ಲಪ್ಪ ಕಿರೇಸೂರ, ಲೀಲಾವತಿ ಚಿತ್ರಗಾರ, ಇತರರಿದ್ದರು.