ಸಾಂದರ್ಭಿಕ ಚಿತ್ರ 
ಗದಗ

rape case: ಅತ್ಯಾಚಾರ ಪ್ರಕರಣದಲ್ಲಿ ಮತ್ತೋರ್ವನ ಬಂಧನ

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ರೋಣ
ತಾಲೂಕಿನ ಗ್ರಾಮವೊಂದರ ಬುದ್ಧಿಮಾಂದ್ಯೆ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ರಾತ್ರಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಈ ಮೂಲಕ ಬಂಧಿತರ ಸಂಖ್ಯೆ ಎರಡಕ್ಕೇರಿದೆ.
ಗ್ರಾಮದ ನಾಗನಗೌಡ ಕಳಕನಗೌಡ್ರ ಬಂಧಿತ ಆರೋಪಿ. ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಅತ್ಯಾಚಾರ ಪ್ರಕರಣದಲ್ಲಿ ಇನ್ನು ಹಲವರ ಕೈವಾಡ ಇರುವ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಮೊದಲು ಬಂಧಿತನಾದ ದುರಗಪ್ಪ ಪೂಜಾರ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಬಂಧಿಸಿದ್ದಾರೆ. 
ಪೊಲೀಸರಿಂದ ಹಲ್ಲೆ ಆರೋಪ: ತಂದೆಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ವಿಚಾರಿಸಲು ತೆರಳಿದ ನನ್ನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ, ಹಲ್ಲೆ ಮಾಡಿದ್ದಾರೆ ಎಂದು ನಾಗನಗೌಡ ಅವರ ಮಗ ಕುಮಾರಗೌಡ ನಾಗನಗೌಡ ಕಳಕನಗೌಡ್ರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ಠಾಣೆಗೆ ಹೋಗಿ ನಮ್ಮ ತಂದೆಯನ್ನು ಏಕೆ ಬಂಧಿಸಿದ್ದರಿ? ಎಂದು ಕೇಳಿದರೆ, ಅತ್ಯಾಚಾರ ಪ್ರಕರಣದಲ್ಲಿ ನಿಮ್ಮ ತಂದೆಯನ್ನು ಬಂಧಿಸಿದ್ದೇವೆ ಎಂದರು. ಡಿಎನ್‌ಎ ಪರೀಕ್ಷಿಸಿ ಎಂದು ಹೇಳಿದರೆ, ನಮಗೆ ಕಾನೂನು ಪಾಠ ಮಾಡಬೇಡ ಎಂದು ಗದರಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ತಂದೆ ಮೇಲಿನ ಆರೋಪವನ್ನು ಮುಚ್ಚಿ ಹಾಕಲು ಪಿಎಸ್‌ಐ ಅವರು ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದರೆ, ನಾನು ಒಂದು ಪೈಸೆಯನ್ನೂ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ನಾಗನಗೌಡ ಪತ್ನಿ ಉಮಾದೇವಿ ಇದ್ದರು.
"

ಬುದ್ಧಿಮಾಂದ್ಯೆ ಯುವತಿಯ ಮೇಲೆ ಅತ್ಯಾಚಾರ ಘಟನೆ ಇಡೀ ಮನುಕುಲವೇ ತಲೆತಗ್ಗಿಸುವಂತಹದ್ದು. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ನಮ್ಮ ಮೇಲೆ ಏನೇ ಆರೋಪ ಮಾಡಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ವಿರುದ್ಧ ದೂರು ನೀಡುವುದಾದರೆ ನಮ್ಮ ಮೇಲಧಿಕಾರಿಗಳಿಗೆ ನೀಡಲಿ. ಕಾನೂನು ತನ್ನ ಕೆಲಸ ಮಾಡಲಿದೆ.

— ಪ್ರಕಾಶ ಬಣಕಾರ ಪಿಎಸ್‌ಐ ರೋಣ