ಶಿರಹಟ್ಟಿ ಪಟ್ಟಣದಲ್ಲಿ ಆರ್‌ಎಎಫ್ 97ನೇ ಬೆಟಾಲಿಯನ್‌ನಿಂದ ಬುಧವಾರ ಪಥ ಸಂಚಲನ (parade)ನಡೆಸಲಾಯಿತು.
ಶಿರಹಟ್ಟಿ: ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಭದ್ರಾವತಿ ಮೂಲದ ಆರ್.ಎ.ಎಫ್. (ಕ್ಷಿಪ್ರ ಕಾರ್ಯಾಚರಣೆ ಪಡೆ) 97ನೇ ಬೆಟಾಲಿಯನ್ ವತಿಯಿಂದ ಬುಧವಾರ ಪಥ ಸಂಚಲನ parade ನಡೆಸಲಾಯಿತು.
ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ 97ನೇ ಆರ್‌ಎಎಫ್ ವಿಶೇಷ ದಂಗೆ-ನಿಯಂತ್ರಣ ಪಡೆಯಾಗಿದೆ. ಕರ್ನಾಟಕ, ಕೇರಳ, ಗೋವಾ, ಪುದುಚೇರಿ ಹಾಗೂ ಲಕ್ಷ ದ್ವೀಪಗಳಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಗಲಭೆ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಈ ಪಡೆ ತಂತ್ರಾತ್ಮಕವಾಗಿ ಸ್ಥಾಪಿಸಲಾಗಿದೆ ಎಂದರು.
ಸಿಪಿಐ ಬಿ.ವಿ. ನ್ಯಾಮಗೌಡ ಮಾತನಾಡಿ, ದಂಗೆಗಳು, ಗಲಭೆ ಸನ್ನಿವೇಶಗಳು ಹಾಗೂ ಆಂತರಿಕ ಭದ್ರತಾ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದು, ಅಗತ್ಯವಿದ್ದಲ್ಲಿ ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಲ್ಲಿಯೂ ಕರ್ತವ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಆರ್‌ಎಎಫ್ 97ನೇ ಬೆಟಾಲಿಯನ್ ಅಸಿಸ್ಟೆಂಟ್ ಕಮಾಂಡೆಂಟ್ ಅನಿಲ್ ಕುಮಾರ್ ಜಾಧವ ಮಾತನಾಡಿ, ಆರ್‌ಎಎಫ್ ಸಿಬ್ಬಂದಿಗೆ ವಿಶೇಷ ತರಬೇತಿ ಹಾಗೂ ಆಯುಧಗಳನ್ನು ನೀಡಲಾಗಿದ್ದು, ಸೂಕ್ಷ್ಮ ಪೊಲೀಸ್ ವ್ಯವಸ್ಥೆಯೊಂದಿಗೆ ಮಾನವೀಯತೆಗೆ ಸೇವೆ ಸಲ್ಲಿಸುವುದು ಎಂಬ ಧ್ಯೇಯ ಹೊಂದಿದೆ ಎಂದರು.
ಶಿರಹಟ್ಟಿ ಪೊಲೀಸ್ ಇನ್ಸ್‌ಪೆಕ್ಟರ್ ಎಸ್. ರವೀಂದ್ರ, ಪಿಎಸ್‌ಐ ಐ.ಎಚ್. ರಿತ್ತಿ, ಆರ್.ಎ.ಎಫ್ ಸಿಬ್ಬಂದಿ ಹಾಗೂ ಶಿರಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.