ಪ್ರಜಾಸೇವಾ ಆಂದೋಲನಕ್ಕೆ ಹೊಳೆಆಲೂರ ಹೋಬಳಿ ಮಟ್ಟದಲ್ಲಿ ಶಾಸಕ ಸಿ.ಸಿ. ಪಾಟೀಲ ಚಾಲನೆ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ತಹಸೀಲ್ದಾರ್ ಕೆ. ನಾಗರಾಜ, ಚಂದ್ರಶೇಖರ ಕಂದಕೂರ, ಜಯಪ್ರಕಾಶ, ಸೋಮನಗೌಡ ಗೌಡರ ಇತರರಿದ್ದರು.
ಹೊಳೆಆಲೂರ: ಸರ್ಕಾರಿ ಸೇವೆಗಳನ್ನು ಜನರಿಗೆ ಮತ್ತಷ್ಟು ಸುಲಭವಾಗಿ ತಲುಪಿಸುವುದು, ಸಾರ್ವಜನಿಕರ ಸಮಸ್ಯೆ ಮತ್ತು ಅಹವಾಲುಗಳನ್ನು ಆಲಿಸಿ ಅವುಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಆಡಳಿತ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವ ಮಹತ್ವಾಂಕ್ಷೆಯ ಸದುದ್ದೇಶದಿಂದ ಪ್ರಜಾಸೇವೆ ಆಂದೋಲನ ಆರಂಭಿಸಿದ್ದು, ವಿರೋಧ ಪಕ್ಷದ ಶಾಸಕನಾಗಿದ್ದರೂ ಸ್ವಾಗತಿಸುತ್ತೇನೆ. ಆದರೆ, ಈ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳಿಂದ ಅಥವಾ ಸರ್ಕಾರದಿಂದ ಅಸಡ್ಡೆಯಾದರೆ ಪ್ರತಿಭಟನೆಗೂ ಹಿಂಜರಿಯುವುದಿಲ್ಲ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಹೊಳೆಆಲೂರ ಗ್ರಾ.ಪಂ.ಆವರಣದಲ್ಲಿ ಶನಿವಾರ ಜರುಗಿದ ಹೊಳೆಆಲೂರ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದೇ ಸೂರಿನಡಿ ಪಿಂಚಣಿ, ಪಹಣಿ, ವಸತಿ, ಹೊಸ ಪಡಿತರ, ಸಾರಿಗೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ದೇವಸ್ಥಾನ ಜೀರ್ಣೋದ್ಧಾರ, ಸರ್ಕಾರಿ ಶಾಲೆ, ಅಂಗನವಾಡಿ, ಆರೋಗ್ಯ ಸೇವೆಗಳ ಸಮಸ್ಯೆಗಳ ಪರಿಹಾರಕ್ಕೆ ಕಚೇರಿಗಳಿಗೆ ಜನರು ಅಲೆದಾಡುವ ಬದಲು, ಆಡಳಿತವೇ ಜನರ ಬಳಿಗೆ ತೆರಳಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರೆ ಮಾತ್ರ ಯೋಜನೆಯ ಉದ್ದೇಶ ಸಾರ್ಥಕ ಎಂದು ಹೇಳಿದರು.
ತಹಸೀಲ್ದಾರ್ ಕೆ. ನಾಗರಾಜ ಮಾತನಾಡಿ, ಪಂ.ರಾಜ್ಯ ಇಲಾಖೆಗೆ 520, ಸಾರಿಗೆ ಇಲಾಖೆಗೆ 9, ಅಬಕಾರಿ 1, ಹೆಸ್ಕಾಂ ಇಲಾಖೆಗೆ 4, ಆಹಾರ ಇಲಾಖೆಗೆ 22, ಅಂಗನವಾಡಿ ಇಲಾಖೆಗೆ 3, ಕಂದಾಯ ಇಲಾಖೆಗೆ 24 ಸೇರಿದಂತೆ ಒಟ್ಟು 599 ಸಾರ್ವಜನಿಕರಿಂದ ಅರ್ಜಿ ಸ್ವೀಕೃತಿಗೆ ಬಂದಿದ್ದು, ಆಯಾ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ತಾ.ಪಂ.ಕಾರ್ಯನಿವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ, ಸಹಾಯಕ ಕೃಷಿ ನಿರ್ದೇಶಕ ಜಯಪ್ರಕಾಶ, ಪಿಎಸ್‌ಐ ಸೋಮನಗೌಡ ಗೌಡರ, ಕಂದಾಯ ನಿರೀಕ್ಷಕ ಎಚ್.ಎಂ. ಪಾಟೀಲ, ಸಾವಿತ್ರಿ ಶಿವನಗೌಡ್ರ, ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಕೋಚಿ, ಪಿಡಿಒ ಬಸವರಾಜ ಗಿರಿತಮ್ಮನ್ನವರ. ಎಂ.ಎಚ್. ಬಾವಿ ಉಪಸ್ಥಿತರಿದ್ದರು.