Protest ಲಕ್ಷ್ಮೇಶ್ವರ ತಾಲೂಕ ಹರದಗಟ್ಟಿ ಗ್ರಾಮದ ರೈತರು ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಲಕ್ಷ್ಮೇಶ್ವರ: ನೀರಾವರಿ ಜಮೀನುಗಳಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಬೆಳೆಗಳು ಒಣಗುತ್ತಿವೆ. ಹೆಸ್ಕಾಂ ನಿಷ್ಕಾಳಜಿಯೇ ಇದಕ್ಕೆ ಕಾರಣ ಎಂದು ಆರೋಪಿಸಿ ರೈತರು ಗುರುವಾರ ಇಲ್ಲಿನ ಹೆಸ್ಕಾಂ ಕಚೇರಿಗೆ ಮುತ್ತಿಗೆ Protest() ಹಾಕಿದರು. ಸಿಬ್ಬಂದಿಯನ್ನು ಕಚೇರಿಯಿಂದ ಹೊರಹಾಕಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ರೈತರು ಕೆಲಕಾಲ ಅಧಿಕಾರಿಗಳೊಂದಿಗೆ ವಾಗ್ವಾದ ಸಹ ನಡೆಸಿದರು.
ಹಗಲಿನಲ್ಲಿ 5 ತಾಸು, ರಾತ್ರಿ 2 ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಹೇಳಿ ಅಧಿಕಾರಿಗಳು ಮೆಸೇಜ್ ಕಳಿಸುತ್ತಾರೆ. ರಾತ್ರಿ 12ಗಂಟೆಯವರೆಗೂ ಕಾದರೂ ವಿದ್ಯುತ್ ನೀಡುವುದಿಲ್ಲ. ಲೈನ್‌ಮನ್‌ಗಳು ಹಾಗೂ ಸೆಕ್ಷನ್ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿದರೆ ಸ್ವೀಕರಿಸಲ್ಲ. ಅದರಂತೆ ಮೇಲಧಿಕಾರಿಗಳಿಗೆ ಕರೆ ಮಾಡಿದರೆ, ಅವರೂ ಕರೆ ಸ್ವೀಕರಿಸಲ್ಲ. ಕಚೇರಿ ನಂಬರ್ ಸದಾ ಸ್ವಿಚ್‌ಆಫ್ ಎಂದು ಬರುತ್ತದೆ. ಹೀಗಾದರೆ ರೈತರು ಯಾರಿಗೆ ದೂರು ನೀಡಬೇಕು ಎಂದು ಅಕ್ರೋಶ ಹೊರಹಾಕಿದರು. ಲೈನ್‌ಮನ್‌ಗಳು ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.
ಸಮಾಧಾನಪಡಿಸಲು ಬಂದ ಎಇಇ ಆಂಜನೇಯಪ್ಪ ಅವರು ರೈತರ ಅಕ್ರೋಶ ಎದುರಿಸಬೇಕಾಯಿತು. ಒಂದು ಟಿಸಿಯಲ್ಲಿ 10ರಿಂದ 15 ಕಲೆಕ್ಷನ್ ಇದ್ದು ಮೊದಲು ಸ್ಟಾರ್ಟ್ ಮಾಡುವರಿಗೆ ಅಷ್ಟೇ ನೀರು ದೊರೆಯುತ್ತದೆ. ಉಳಿದವರು ಪ್ರಾರಂಭ ಮಾಡಿದಾಗ ಟ್ರಿಪ್ ಆಗುತ್ತದೆ. ಟಿಸಿಗಳಿಗೆ ಎಷ್ಟು ಕನೆಕ್ಷನ್ ಕೊಡಬೇಕು ಎನ್ನುವುದನ್ನು ನೋಡದೆ ದುಡ್ಡು ತೆಗೆದುಕೊಂಡು ಬೇಕಾಬಿಟ್ಟಿ ಸಂಪರ್ಕ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಮೆಕ್ಕೆಜೋಳ ಹಾಳಾಗಿದೆ, ಸಂಬಂಧಪಟ್ಟ ಅಧಿಕಾರಿ ಅಮಾನತು ಮಾಡಿ ಎಂದು ಪಟ್ಟು ಹಿಡಿದರು. ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಆಗಮಿಸಿ ಹೋರಾಟಕ್ಕೆ ಬೆಂಬಲ ನೀಡಿದರು.