ಗಜೇಂದ್ರಗಡದಲ್ಲಿ ವಿಹಿಂಪ, ಬಜರಂಗದಳ ಹಾಗೂ ಕ್ಷತ್ರೀಯ ಮರಾಠಾ ಸಮಾಜದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. 
ಗದಗ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಗಜೇಂದ್ರಗಡ: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ಹಾಗೂ ಜಿಲ್ಲೆಯಲ್ಲಿ ಹಿಂದೂ ದೇವರ ಮೂರ್ತಿಗಳನ್ನು ಭಗ್ನಗೊಳಿಸಿದವರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿಹಿಂಪ, ಬಜರಂಗದಳ ಹಾಗೂ ಕ್ಷತ್ರೀಯ ಮರಾಠಾ ಸಮಾಜದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ವಿಹಿಂಪ, ಬಜರಂಗದಳ ತಾಲೂಕಾಧ್ಯಕ್ಷ ರವಿ ಕಲಾಲ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ರಾಜ್ಯದಲ್ಲಿ ಕೋಮುಗಲಭೆ ಹೆಚ್ಚುತ್ತಿವೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಬಹುಸಂಖ್ಯಾತ ಹಿಂದೂಗಳ ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕೊನೆಗಾಲ ಬಂದಿದೆ. ಬಾಗಲಕೋಟೆಯಲ್ಲಿ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುತ್ತಿದ್ದಾಗ ದಂಧೆಕೋರರು ವಿನಾಕಾರಣ ಕಲ್ಲು ತೂರಿ ಪೊಲೀಸ್ ಅಧಿಕಾರಿಗಳನ್ನೇ ಗಾಯಗೊಳಿಸಿರುವುದು ಖಂಡನೀಯ ಹಾಗೂ ಬಾಗಲಕೋಟೆ ಪ್ರವೇಶಕ್ಕೆ ಪ್ರಮೋದ ಮುತಾಲಿಕ ಅವರಿಗೆ ವಿಧಿಸಿರುವ ನಿಷೇಧ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಕಾರ್ಯದರ್ಶಿ ಪ್ರಸಾದ ಬಡಿಗೇರ ಮಾತನಾಡಿ, ರಾಜ್ಯದಲ್ಲಿ ಹಿಂದೂಗಳ ಹಬ್ಬಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಹಿಂದೂ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿರುವ ಮದರಸಾ ಶಿಕ್ಷಣವನ್ನು ಬಂದ್ ಮಾಡಿಸಬೇಕು ಆಗ್ರಹಸಿದರು.
ಬಜರಂಗದಳ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಕಾಲಕಾಲೇಶ್ವರ ವೃತ್ತ  ತಲುಪಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. 
ಪಿಎಸ್ ಐ ಪ್ರಕಾಶ ಡಿ. ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು. ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷ ಬಾಬಣ್ಣ ಘಾಟಗೆ, ಶ್ರೀಧರ ಕುಲಕರ್ಣಿ, ರವಿ ಶಿಂಗ್ರಿ, ಬಾಬಣ್ಣ ರಾಜೋಳಿ, ಯಮನಪ್ಪ ತಿರಕೋಜಿ, ಮಾರುತಿ ಗಡ್ಡದ, ಲಕ್ಷ್ಮಣ ರಾಮಜಿ, ಕಲ್ಲಪ್ಪ ರಾಮಜಿ, ಮಹಾಂತೇಶ ಗಂಧದ, ಶೇಖಪ್ಪ ರಾಮಾಜಿ, ಶೇಶು ರಾಯಬಾಗಿ, ಶಿವಾಜಿ ಹಾಳಕೇರಿ, ಕಿರಣ ಕಮ್ಮಾರ, ವಿನಾಯಕ ತಳವಾರ, ಶಿವು ಬನಿಗೋಳ ಇತರರು ಇದ್ದರು.