ಡಾ. ಚಂದ್ರು ಲಮಾಣಿ ಅವರ ಶಾಸಕ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಶಿರಹಟ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ರಾಮಣ್ಣ ಎಸ್. ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸುಜಾತ ಎಲ್. ದೊಡ್ಡಮನಿ, ಹುಮಯನ್ ಮಾಗಡಿ ಇದ್ದರು.
ವಿಜಯವಾಣಿ ಸುದ್ದಿಜಾಲ ಶಿರಹಟ್ಟಿ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ತಕ್ಷಣವೇ ಶಾಸಕ ಸ್ಥಾನದಿಂದ ಅಮಾನತುಗೊಳಿಸಿ ಸದಸ್ಯತ್ವ ರದ್ದುಗೊಳಿಸಬೇಕೆಂದು ಆಗ್ರಹಿಸಿ ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪೇಟೆ ಆಂಜನೇಯ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಾಸಕ ಡಾ. ಚಂದ್ರು ಲಮಾಣಿ ಅವರು ಗುತ್ತಿಗೆದಾರನಿಂದ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಈ ಘಟನೆಯಿಂದ ಕ್ಷೇತ್ರದ ಗೌರವಕ್ಕೆ ಧಕ್ಕೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗಳು ತೀವ್ರಗೊಂಡಿವೆ. ಹೀಗಾಗಿ ಶಾಸಕರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ರಾಮಣ್ಣ ಎಸ್. ಲಮಾಣಿ, ರಾಮಕೃಷ್ಣ ದೊಡ್ಡಮನಿ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹುಮಾಯನ್ ಮಾಗಡಿ, ಸುಜಾತ ಎಲ್. ದೊಡ್ಡಮನಿ, ಡಿ.ಕೆ. ಹೊನ್ನಪ್ಪನವರ, ಎಂ.ಕೆ. ಲಮಾಣಿ, ಬುಡ್ಯನಸಾಬ ಮಕಾನದಾರ, ಮಹಬೂಬಸಾಬ ಲಕ್ಷ್ಮೇಶ್ವರ, ದೇವಪ್ಪ ಲಮಾಣಿ, ಮಂಜುನಾಥ ಘಂಟೆ ಇತರರಿದ್ದರು.