(online) ಶಿರಹಟ್ಟಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಕರೆಯಲಾದ ಪಪಂ ಬಜೆಟ್ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಮಾತನಾಡಿದರು. ಮುಖ್ಯಾಧಿಕಾರಿ ಸವಿತಾ ತಾಂಬ್ರೆ ಇದ್ದರು. 
ಗದಗ

online: ಆನ್‌ಲೈನ್ ಪೇಮೆಂಟ್‌ಗೆ ಆದ್ಯತೆ ನೀಡಿ

ಸೋಮನಾಥ ರೆಡ್ಡಿ

ಪ್ರಮುಖ ಮುಖ್ಯಾಂಶಗಳು

  • 11ನೇ ವಾರ್ಡ್‌ನ ಈದ್ಗಾ ಮೈದಾನಕ್ಕೆ ಕಾಂಕ್ರೀಟ್ ರಸ್ತೆ ಸಂಪರ್ಕ ಕಲ್ಪಿಸಬೇಕು.
  • ಕಚೇರಿ ಸೇತುವೆಗೆ ಸೈಡ್ ವಾಲ್ ನಿರ್ಮಾಣ ಹಾಗೂ ಹೈ-ಮಾಸ್ಟ್ ದೀಪಗಳ ದುರಸ್ತಿ.
  • ಸಂತೆ ದಿನದ ವ್ಯಾಪಾರಿಗಳಿಗೆ ಸುಸಜ್ಜಿತ ಫುಟ್‌ಪಾತ್ ನಿರ್ಮಾಣ.
  • ನವನಗರದ ಬಡಾವಣೆಗಳಲ್ಲಿನ ರಸ್ತೆ ಅತಿಕ್ರಮಣ ತೆರವುಗೊಳಿಸುವುದು.
ಶಿರಹಟ್ಟಿ: ಯಾವುದೇ ಪಟ್ಟಣದ ಸಮಗ್ರ ಅಭಿವೃದ್ಧಿಯು ಅಲ್ಲಿನ ಆದಾಯದ ಕ್ರೋಡೀಕರಣದ ಮೇಲೆ ಅವಲಂಬಿತವಾಗಿರುತ್ತದೆ. (online) ಸಾರ್ವಜನಿಕರು ನಿಗದಿತ ಸಮಯಕ್ಕೆ ಆಸ್ತಿ ತೆರಿಗೆ, ನೀರು ಹಾಗೂ ವಿದ್ಯುತ್ ಬಿಲ್‌ಗಳನ್ನು ಪಾವತಿಸಿದರೆ ಪಟ್ಟಣದಲ್ಲಿ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಹಾಗೂ ಪ.ಪಂ. ಆಡಳಿತಾಧಿಕಾರಿ ಕೆ.ರಾಘವೇಂದ್ರರಾವ್ ಹೇಳಿದರು.
ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಕರೆಯಲಾದ ಶಿರಹಟ್ಟಿ ಪಟ್ಟಣ ಪಂಚಾಯಿತಿಯ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಇಂದಿನ ಆಧುನಿಕ ಯುಗದಲ್ಲಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಾರ್ವಜನಿಕರು ಆನ್‌ಲೈನ್ ಪೇಮೆಂಟ್ ಆ್ಯಪ್‌ಗಳ ಮೂಲಕ ತೆರಿಗೆ ಪಾವತಿಸಬೇಕು. ಇದರಿಂದ ಸಮಯ ಉಳಿತಾಯವಾಗುವುದಲ್ಲದೆ ಪಾರದರ್ಶಕತೆ ಮೂಡುತ್ತದೆ. ಸ್ಥಳದಲ್ಲಿಯೇ ರಸೀದಿ ಪಡೆಯುವ ಸೌಲಭ್ಯವಿದ್ದು, ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ.ಪಂ. ಮುಖ್ಯಾಧಿಕಾರಿ ಸವಿತಾ ತಾಂಬ್ರೆ ಮಾತನಾಡಿ, ಈಗಾಗಲೇ ಪಟ್ಟಣದ 18 ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿ 2026-27ನೇ ಸಾಲಿನ ಅಭಿವೃದ್ಧಿ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದೆ. ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಬೀದಿ ದೀಪ ಹಾಗೂ ಪರಿಶಿಷ್ಟ ಜಾತಿ/ಪಂಗಡದ ಕಾಲನಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ ಸಿದ್ದರಾಮೇಶ್ವರ ನಗರದಂತಹ ಹೊಸ ಬಡಾವಣೆಗಳಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಚಾಂದಸಾಬ ಮುಳಗುಂದ, ಹೊನ್ನಪ್ಪ ಶಿರಹಟ್ಟಿ, ಅಲ್ಲಾಭಕ್ಷಿ ನಗಾರಿ, ಮಾಬುಸಾಬ ಲಕ್ಷ್ಮೇಶ್ವರ, ಆನಂದ ಕೋಳಿ, ಅಶರತ್ ಢಾಲಾಯತ್, ಇಸಾಕ್ ಅಹಮ್ಮದ್ ಆದ್ರಳ್ಳಿ, ಕೆ.ಎ. ಬಳಿಗೇರ, ಎಚ್.ಎಂ. ದೇವಗಿರಿ, ಮುನ್ನಾ ಢಾಲಾಯತ್ ಇತರರಿದ್ದರು.

ಬೇಸಿಗೆ ಮುನ್ನೆಚ್ಚರಿಕೆ

ದಿನೇದಿನೆ ಹೆಚ್ಚುತ್ತಿರುವ ಬಿಸಿಲಿನ ತಾಪವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಂದ ದೂರುಗಳು ಬರುವ ಮೊದಲೇ ವ್ಯವಸ್ಥಿತವಾಗಿ ನೀರು ಪೂರೈಸಬೇಕು ಎಂದು ತಹಸೀಲ್ದಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.