PEANUT ಕಂಠಿ ಶೇಂಗಾ ಫಸಲಿನ ಸ್ಥಿತಿ. 
ಗದಗ

PEANUT ‘ಕಂಠಿ’ ಶೇಂಗಾಕ್ಕೆ ವರುಣನ ‘ಕಂಟಕ’

ರವಿ ಎಸ್. ಬಳೂಟಗಿ
ಶಿರಹಟ್ಟಿ: ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸಿ, ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ರೈತರು ಈಗ ನಿರಂತರ ಮಳೆಗೆ ಬೆಚ್ಚಿ ಬಿದ್ದಿದ್ದಾರೆ. ‘ಸಾಕಪ್ಪ.. ಸಾಕು’ ಎಂದರೂ ಮಳೆರಾಯ ಬಿಡುವು ನೀಡುತ್ತಿಲ್ಲ. ವರುಣನ ಆರ್ಭಟಕ್ಕೆ ತಾಲೂಕಿನ ಶೇಂಗಾ ಬೆಳೆದವರು ಕಂಗೆಟ್ಟಿದ್ದಾರೆ.
ಹೊಲದಲ್ಲೇ ಕೊಳೆತ ಫಸಲು: ಮೋಡಕವಿದ ವಾತಾವರಣ ಮತ್ತು ತುಂತುರು ಮಳೆಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಪರದಾಟ ನಡೆಸುತ್ತಿದ್ದಾರೆ. ತಾಲೂಕಿನಲ್ಲಿ ಹೆಚ್ಚು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯಲಾಗಿದೆ. ವರುಣನ ಆರ್ಭಟಕ್ಕೆ ಶೇಂಗಾ, ತೊಗರಿ ಮತ್ತು ಹತ್ತಿ ಬೆಳೆಗಳು ನೀರಿನಲ್ಲಿ ಸಿಲುಕಿ ಕೊಳೆಯುತ್ತಿವೆ.
ಹತ್ತಿ ಮತ್ತು ತೊಗರಿ ಬೆಳೆಗಳು ಹೂವು ಬಿಡುವ ಹಂತದಲ್ಲಿವೆ. ಕೆಲವೆಡೆ ಕಾಯಿ ಕಟ್ಟುವ ಹಂತವನ್ನೂ ತಲುಪಿವೆ. ಆದರೆ ಸತತ ಮಳೆಯಿಂದಾಗಿ ನೆಲಕ್ಕೊರಗಿವೆ. ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಬಿತ್ತನೆಯಾಗಿದ್ದ ಮೆಕ್ಕೆಜೋಳ ಮತ್ತು ಶೇಂಗಾ ಎಷ್ಟರ ಮಟ್ಟಿಗೆ ರೈತರ ಕೈ ಸೇರಲಿದೆ ಎಂಬ ಆತಂಕ ಶುರುವಾಗಿದೆ. ಮೆಕ್ಕೆಜೋಳ, ಹತ್ತಿ, ಹಬ್ಬು ಶೇಂಗಾ ಸೇರಿದಂತೆ ಇತರ ಬೆಳೆಗಳಿಗೆ ಉತ್ತಮ ಇಳುವರಿಗಾಗಿ ಮತ್ತು ಕೀಟ, ರೋಗ, ಕಳೆ ನಿಯಂತ್ರಣಕ್ಕಾಗಿ ರೈತರು ಹತ್ತಾರು ಸಾವಿರ ರೂಪಾಯಿ ವ್ಯಯ ಮಾಡಿದ್ದಾರೆ. ಮೂರ್ನಾಲ್ಕು ಬಾರಿ ಕೀಟನಾಶಕ ಸಿಂಪಡಿಸಲಾಗಿದೆ. ಮಳೆ ಹೆಚ್ಚಾಗಿರುವುದರಿಂದ ಹೊಲಗಳಲ್ಲಿ ಮತ್ತೆ ಕಳೆ ಬೆಳೆದಿದೆ. ಮೆಣಸಿನಕಾಯಿ ಮತ್ತು ಉಳ್ಳಾಗಡ್ಡಿ ಬೆಳೆಗಳು ತೇವಾಂಶ ಹೆಚ್ಚಾಗಿ ಕೊಳೆಯುತ್ತಿವೆ.

ಒಕ್ಕಲಿ ಮಾಡಿದ ಫಸಲಿಗೂ ಸಂಕಷ್ಟ

ಕಳೆದ 20 ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಕಂಠಿ ಶೇಂಗಾ ಸಂಪೂರ್ಣ ನೀರು ನಿಂತು ಕೊಳೆಯುತ್ತಿದೆ. ರೈತರು ಕಷ್ಟ್ಟಪಟ್ಟು ಒಕ್ಕಲಿ ಮಾಡಿ ರಾಶಿ ಹಾಕಿದ್ದ ಮೆಕ್ಕೆಜೋಳ ಅಕಾಲಿಕ ಮಳೆಗೆ ಮೊಳಕೆ ಒಡೆದು ವಾಸನೆ ಬೀರುತ್ತಿವೆ. ಇದರಿಂದ ರೈತರಿಗೆ ಮತ್ತಷ್ಟು ನಷ್ಟ ಉಂಟಾಗಿದೆ.

ಮಾರುಕಟ್ಟೆಯಲ್ಲೂ ದರ ಇಲ್ಲ

ಸುರಿಯುತ್ತಿರುವ ಮಳೆಯಲ್ಲಿಯೇ ಕೆಲ ರೈತರು ಕಂಠಿ ಶೇಂಗಾ ಒಕ್ಕಲಿ ಮಾಡಿದ್ದರೂ ಅದನ್ನು ಒಣಗಿಸಿ, ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕೊಂಡೊಯ್ಯಲು ಬಿಸಿಲಿನ ದರ್ಶನ ಆಗುತ್ತಿಲ್ಲ. ಶ್ರಮಪಟ್ಟು ಬೆಳೆದ ಫಸಲಿಗೆ ಮಾರುಕಟ್ಟೆಯಲ್ಲಿ ಯೋಗ್ಯ ದರವೂ ಸಿಗುತ್ತಿಲ್ಲ. ಇದು ಶೇಂಗಾ ಬೆಳೆದವರನ್ನು ಮತ್ತಷ್ಟು ಚಿಂತೆಗೆ ದೂಡಿದೆ. ಸರ್ಕಾರ ತಕ್ಷಣ ಬೆಳೆ ಹಾನಿಯ ಸಂಪೂರ್ಣ ಸಮೀಕ್ಷೆ ನಡೆಸಿ, ನೊಂದ ರೈತರಿಗೆ ಪರಿಹಾರ ನೀಡಲು ಸ್ಪಂದಿಸಬೇಕಿದೆ
"

ಬೀಜ, ರಸಗೊಬ್ಬರ, ಕಳೆ ಎಂದು ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಫಸಲು ಕೈಸೇರುವ ಹಂತದಲ್ಲಿ ಮಳೆ ಸುರಿಯುತ್ತಿರುವುದರಿಂದ ಒಕ್ಕಲಿ ಮಾಡಲು ಆಗುತ್ತಿಲ್ಲ. ಕಷ್ಟದಲ್ಲಿಯೇ ದಿನ ಕಳೆಯುವಂತಾಗಿದೆ. ಸರ್ಕಾರ ಪರಿಹಾರ ನೀಡುವಲ್ಲಿಯೂ ನಿರ್ಲಕ್ಷೃ ತೋರುತ್ತದೆ.

-ಮಾಲಪ್ಪ ಚವ್ಹಾಣ, ಶೇಂಗಾ ಬೆಳೆಗಾರ

"

ಶಿರಹಟ್ಟಿ ತಾಲೂಕಿನಲ್ಲಿ 1500 ಹೆಕ್ಟೇರ್ ಪ್ರದೇಶದಲ್ಲಿ ಗೆಜ್ಜೆ ಶೇಂಗಾ, 29,526 ಹೆಕ್ಟೇರ್ ಮೆಕ್ಕೆಜೋಳ, 1100 ಹೆಕ್ಟೇರ್ ಬಿಟಿ ಹತ್ತಿ, ಮತ್ತು 950 ಹೆಕ್ಟೇರ್ ತೊಗರಿ ಬಿತ್ತನೆ ಮಾಡಲಾಗಿದೆ. ಶೇ. 40ರಷ್ಟು ಮೆಕ್ಕೆಜೋಳ ಒಕ್ಕಲಿ ಮಾಡಲಾಗಿದೆ. ಶೇಂಗಾ ಒಕ್ಕಲಿಗೆ ಮಳೆಯಿಂದ ಹಿನ್ನಡೆಯಾಗುತ್ತಿದೆ. ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದ್ದು, ಮುಂಗಾರು ಬೆಳೆ ಹಾನಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲಾಗಿದೆ.

-ರೇವಣೆಪ್ಪ ಮನಗೂಳಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ