ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್‌ಲ್ ಮಾತನಾಡಿದರು. ಉಮಾ ದ್ಯಾವನೂರ, ಟಿ.ಬಿ.ಶಿರಿಯಪ್ಪಗೌಡ್ರ, ವಿರೇಶ ಚುಳಕಿ, ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ನರಗುಂದ
ಸಾರ್ವಜನಿಕರ ಸಹಕಾರದಿಂದ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳು ಶೇ.99ರಷ್ಟು ಪ್ರಗತಿ ಸಾಧಿಸಿವೆ. ಇದಕ್ಕೆ ಅಧಿಕಾರಿಗಳ ಶ್ರಮ, ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಆಸಕ್ತಿಯೇ ಕಾರಣ ಎಂದು ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ವಿವೇಕ ಯಾವಗಲ್ಲ ಹೇಳಿದರು.
ತಾಲೂಕಿನ ಹಿರೇಕೊಪ್ಪ ಗ್ರಾಪಂ ಸಭಾ ಭವನದಲ್ಲಿ ನಡೆದ ತಾಲೂಕು ಮಟ್ಟದ ಉಚಿತ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜರುಗಿದ ಸಭೆಯಲ್ಲಿ ಅವರು ಮಾತನಾಡಿ, ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಉಳಿದಿರುವ ಶೇ.1 ರಷ್ಟು ಫಲಾನುಭವಿಗಳನ್ನು ಪತ್ತೆ ಹಚ್ಚುವ ಮುಖಾಂತರ ನರಗುಂದ ತಾಲೂಕನ್ನು ಶೇ.100 ಗುರಿಯೆಡೆಗೆ ಕೊಂಡೊಯ್ಯಬೇಕು ಎಂದು ತಿಳಿಸಿದರು.
ನರಗುಂದ ಸಾರಿಗೆ ಘಟಕ ವ್ಯವಸ್ಥಾಪಕ ಪರಶುರಾಮ ಪ್ರಭಾಕರ ಮಾತನಾಡಿ, ಪ್ರತಿ ತಿಂಗಳು ಸರಾಸರಿ 19,656 ಮಹಿಳಾ ಪ್ರಯಾಣಿಕರು ಪ್ರಯಾಣಿಸುವ ಮೂಲಕ ಡಿಸೆಂಬರ್ ಅಂತ್ಯದವರೆಗೆ ಕೆಎಸ್‌ಆರ್‌ಟಿಸಿಗೆ 6524.84 ಲಕ್ಷ ರೂ. ಆದಾಯ ಬಂದಿದೆ ಎಂದು ತಿಳಿಸಿದರು. ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನ 23,430 ಯಜಮಾನಿಯರಿಗೆ 2 ಸಾವಿರದಂತೆ ಆಗಸ್ಟ್ ಅಂತ್ಯದವರೆಗೆ ಹಣ ಪಾವತಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ತಾಲೂಕಿನ 25,370 ವಿದ್ಯುತ್ ಸ್ಥಾವರಗಳ ಪೈಕಿ 25,118 ನೋಂದಾಯಿತ ಸ್ಥಾವರಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ ಎಂದು ಹೆಸ್ಕಾಂ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಆಹಾರ ನಿರೀಕ್ಷಕ ಅನಿಲ ಪವಾರ ಮಾತನಾಡಿ, ಅನ್ನಭಾಗ ಯೋಜನೆಯಡಿ 23,114 ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೆ 10 ಕೆ.ಜಿ ಅಕ್ಕಿಯಂತೆ ಒಟ್ಟು 78,750 ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಿಸಲಾಗಿದೆ ಎಂದು ತಿಳಿಸಿದರು.
ಯುವನಿಧಿ ಯೋಜನೆಯಡಿ ನರಗುಂದ ತಾಲೂಕಿನ 628 ವಿದ್ಯಾರ್ಥಿಗಳು ನೋಂದಣೆ ಮಾಡಿಕೊಂಡಿದ್ದರು. ಈ ಪೈಕಿ 372 ವಿಧ್ಯಾರ್ಥಿಗಳಿಗೆ 11,11,500 ರೂ. ಅನುದಾನ ಪಾವತಿಸಲಾಗಿದೆ. ಇನ್ನೂಳಿದ 256 ವಿಧ್ಯಾರ್ಥಿಗಳಿಗೆ ಯೋಜನೆ ನಿಯಮಗಳನ್ವಯ ಅನುದಾನ ನೀಡಲಾಗುವುದೆಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಾಪಂ ಇಒ ಎಸ್.ಕೆ. ಇನಾಂದಾರ, ಗ್ಯಾರಂಟಿ ಸಮಿತಿ ಸದಸ್ಯರಾದ ಟಿ.ಬಿ. ಶಿರಿಯಪ್ಪಗೌಡ್ರ, ಉಮಾ ದ್ಯಾವನೂರ, ದ್ಯಾಮಣ್ಣ ಕಾಡಪ್ಪನವರ, ರಮಜಾನಸಾಬ ನದಾಫ್, ವೀರೇಶ ಚಳುಕಿ, ವಿನಾಯಕ ಹಡಗಲಿ, ವೀರಯ್ಯ ಹುಚ್ಚಪ್ಪಯ್ಯನಮಠ, ಬಸವರಾಜ ಹೊಂಗಲ, ಹನಮಂತ ರಾಮಣ್ಣವರ, ಶೇಖರಗೌಡ ಮದ್ನೂರ, ಹಿರೇಕೊಪ್ಪ ಗ್ರಾಪಂ ಪಿಡಿಒ ಶೈನಾಜ್ ಮುಜಾವರ ಉಪಸ್ಥಿತರಿದ್ದರು. ಪ್ರದೀಪ ಕದಂ ನಿರ್ವಹಿಸಿದರು.