ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಓಂಕಾರ (omkara) ಮಂತ್ರ ಜಪ ಕೈಗೊಳ್ಳಲಾಯಿತು.
ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಬಿಜೆಪಿಯಿಂದ ಸೋಮನಾಥ ಸ್ವಾಭಿಮಾನ ಪರ್ವ ಕಾರ್ಯಕ್ರಮದನ್ವಯ ಶನಿವಾರ ಬೆಳಗ್ಗೆ ಓಂಕಾರ omkara ಮಂತ್ರ ಜಪ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಲಮಾಣಿ, 2026ಕ್ಕೆ ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಮೇಲೆ ಘಜನಿ ಮಹಮದ್ ದಾಳಿ 1000 ವರ್ಷವಾಯಿತು. ಈ ದಾಳಿಯು ಅಂದು (ಜನವರಿ 8, 9 ಮತ್ತು 10) ಮೂರು ದಿನಗಳ ಕಾಲ ನಡೆದಿತ್ತು. ನಂತರದ ಅನೇಕ ದಾಳಿಗಳು ದೇವಸ್ಥಾನ ಮುಟ್ಟಲಾಗಲಿಲ್ಲ.
ಭಾರತದ ಸಾಂಸ್ಕೃತಿಕ ಏಕತೆ, ಪ್ರಜ್ಞೆಯನ್ನು ಬಲಪಡಿಸಿದವು. ಸೋಮನಾಥ ದೇವಸ್ಥಾನ ಮತ್ತೆ ಗತವೈಭವದೊಂದಿಗೆ ಮರು ನಿರ್ಮಾಣಗೊಂಡು ಈಗ 75 ವರ್ಷವಾಯಿತು.
ಜ. 10ರಂದು ದೇಶದ ಎಲ್ಲ ಶಿವಾಲಯಗಳಲ್ಲಿ ಪೂಜೆ, ಆರತಿ ಓಂಕಾರ ಮಂತ್ರ ಜಪಿಸಲು ನಿರ್ಧರಿಸಲಾಗಿತ್ತು. ದೇಶವಾಸಿಗಳು ಈ ಜನ-ಅಭಿಯಾನದಲ್ಲಿ ಪಾಲ್ಗೊಂಡು, ಮೂರು ದಿನಗಳಲ್ಲಿ ತಮ್ಮ ಹತ್ತಿರದ ಶಿವಾಲಯಗಳಲ್ಲಿ ಮಂತ್ರ ಪಠಣದಲ್ಲಿ ಭಾಗವಹಿಸುವುದು ಇದರ ಉದ್ದೇಶವಾಗಿತ್ತು.
ಅದರೊಂದಿಗೆ, ಸೋಮನಾಥ ದೇವಾಲಯದ ಅಖಂಡತೆಯನ್ನು ಕಾಪಾಡಲು ಪ್ರಾರ್ಥನೆ ಮತ್ತು ಸಂಕಲ್ಪ ಮಾಡಬೇಕು. ಈ ಬಗ್ಗೆ ಜನತೆಯ ಸಹನಶೀಲತೆ, ಏಕತೆ, ಅಖಂಡತೆ, ನಿರಂತರತೆ, ಪುನರುತ್ಥಾನದ ಯಶೋಗಾಥೆಯನ್ನು ನೆನಪಿಸಿಕೊಳ್ಳಲು ಕೇಂದ್ರ ಸರ್ಕಾರ ಈ ವರ್ಷ ಸೋಮನಾಥ ಪರ್ವವನ್ನು ಆಯೋಜಿಸಲು ನಿಶ್ಚಯಿಸಿತ್ತು.
ಅದರಂತೆ ಜ. 11 ರಂದು ಪ್ರಧಾನಮಂತ್ರಿ ಅವರ ನೇತೃತ್ವದಲ್ಲಿ ಸೋಮನಾಥ ದೇವಾಲಯದಲ್ಲಿ ಸಹಸ್ರ ಸಂಕಲ್ಪ ಯಾತ್ರೆ ಆಯೋಜಿಸಲಾಗಿದ್ದು, ಸೋಮನಾಥ ಸ್ವಾಭಿಮಾನ ಪರ್ವವನ್ನು ವರ್ಷವಿಡೀ ಆಚರಿಸಲಾಗುವುದು ಎಂದರು.
ಶಿರಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಪ್ರ.ಕಾರ್ಯದರ್ಶಿ ಅನಿಲ ಮುಳಗುಂದ, ವಿಜಯಕುಮಾರ ಹತ್ತಿಕಾಳ, ಮಹಾದೇವಪ್ಪ ಅಣ್ಣಿಗೇರಿ, ಮಂಜುಳಾ ಗುಂಜಳ, ಕವಿತಾ ಶೇರಸೂರಿ, ಎಂ.ಆರ್. ಪಾಟೀಲ, ನಿಂಗಪ್ಪ ಬನ್ನಿ, ಗಂಗಾಧರ. ಮೆಣಸಿನಕಾಯಿ, ಚನ್ನವೀರಗೌಡ ಪಾಟೀಲ, ಶಿವನಗೌಡ ಕಂಠಿಗೌಡ್ರ, ಚನ್ನವೀರಪ್ಪ ಹೂಗಾರ, ನೂರಾರು ಕಾರ್ಯಕರ್ತರಿದ್ದರು.