ಸವಡಿಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಮಾಡುತ್ತಿರುವ ರಮೇಶ ಕಂಬಳಿ. 
ಗದಗ

NREGA: ಚಪ್ಪಾಳೆ ತಟ್ಟುವ ಕೈಗೂ ನರೇಗಾ ಆಧಾರ!

ಗದಗ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗ ಖಾತ್ರಿ ಯೋಜನೆಯಡಿ ಐದು ವರ್ಷಗಳಿಂದ ಕೆಲಸ
  • ಸ್ವಾಭಿಮಾನದ ಸಂಕೇತ ಸವಡಿ ಗ್ರಾಮದ ತೃತೀಯ ಲಿಂಗಿ ರಮೇಶ
  • ಗ್ರಾಮಸ್ಥರ ಪ್ರೀತಿಯೇ ರಮೇಶನಿಗೆ ಶಕ್ತಿ
ತಿಪ್ಪಣ್ಣ ಅವಧೂತ ರೋಣ
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(NAREGA) ಗ್ರಾಮೀಣ ಭಾಗದ ಜನರಿಗೆ ಆಧಾರವಾಗಿದೆ. ಕೆಲಸಕ್ಕಾಗಿ ಊರೂರು ಅಲೆಯುತ್ತಿದ್ದವರಿಗೆ ನೆಮ್ಮದಿಯ ಬದುಕು ಕಲ್ಪಿಸಿದೆ. ಅದೇ ರೀತಿ ತೃತೀಯ ಲಿಂಗಿಯೊಬ್ಬರಿಗೆ ಉದ್ಯೋಗ ನೀಡಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವದ ಬದುಕು ತಂದುಕೊಟ್ಟಿದೆ.
ರೋಣ ತಾಲೂಕಿನ ಸವಡಿ ಗ್ರಾಮದ 42 ವರ್ಷದ ತೃತೀಯ ಲಿಂಗಿ ರಮೇಶ ವಿರೂಪಾಕ್ಷಪ್ಪ ಕಂಬಳಿ ನರೇಗಾ ಯೋಜನೆಯಡಿ ಉದ್ಯೋಗ ಪಡೆದು ಮುಖ್ಯವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಮಾದರಿಯಾಗಿದ್ದಾರೆ. ಐದು ವರ್ಷಗಳ ಹಿಂದೆ ಮೊದಲ ಬಾರಿಗೆ ನರೇಗಾ ಯೋಜನೆ ಅಡಿಯಲ್ಲಿ ಮಣ್ಣು ಅಗೆಯಲು ಗುದ್ದಲಿ ಹಿಡಿದೆ, ಅದು ಕೇವಲ ಒಂದು ಕೆಲಸವಾಗಿರಲಿಲ್ಲ. ಬದಲಿಗೆ ಅದು ಸ್ವಾಭಿಮಾನದ ಸಂಕೇತವಾಗಿತ್ತು ಎನ್ನುತ್ತಾರೆ ರಮೇಶ. ಗ್ರಾಮದ ಜನ ರಮೇಶನನ್ನು ಸರಿಸಮಾನವಾಗಿ ನಡೆಸಿಕೊಳ್ಳುತ್ತಾರೆ. ಅವನು ನಮ್ಮ ಊರಿನ ಮಗ, ನಮ್ಮಂತೆಯೇ ದುಡಿದು ಬದುಕುತ್ತಿದ್ದಾನೆ ಎಂಬ ಗ್ರಾಮಸ್ಥರ ಪ್ರೀತಿಯೇ ರಮೇಶನಿಗೆ ಜಗತ್ತನ್ನು ಗೆಲ್ಲುವ ಶಕ್ತಿ ನೀಡಿದೆ.
"

ತೃತೀಯ ಲಿಂಗಿ ರಮೇಶ ಅವರು 5 ವರ್ಷಗಳಿಂದ ಸತತವಾಗಿ ನರೇಗಾ ಕೆಲಸ ಮಾಡುತ್ತಿರುವುದು ಇಡೀ ತಾಲೂಕಿಗೆ ಹೆಮ್ಮೆ. ಭಿಕ್ಷಾಟನೆ ಮೆಟ್ಟಿ ನಿಂತು ಸ್ವಾವಲಂಬಿಯಾದ ಇವರಿಗೆ ಇಲಾಖೆಯಿಂದ ಸಿಗಬೇಕಾದ ವೈಯಕ್ತಿಕ ಜಮೀನಿನ ಕಾಮಗಾರಿಗಳು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ.

— ಚಂದ್ರಶೇಖರ ಬಿ. ಕಂದಕೂರ, ತಾಲೂಕು ಪಂಚಾಯಿತಿ ಇಒ, ರೋಣ

ನನ್ನಂಥವರು ಸಮಾಜದಲ್ಲಿ ಬದುಕುವುದು ಬಹಳ ಕಷ್ಟ ಇದೆ. ನಾನೂ ಸಿಟಿಗೆ ಹೋಗಿ ಭಿಕ್ಷೆ ಬೇಡಿ ಸುಲಭವಾಗಿ ದುಡ್ಡು ಮಾಡಬಹುದಿತ್ತು. ಆದರೆ, ನನಗೆ ನನ್ನ ತಾಯಿಯ ಸಂಸ್ಕಾರ ಮುಖ್ಯವಾಗಿದೆ. ಹಳ್ಳಿಯ ಮಣ್ಣಿನಲ್ಲಿ ಕಷ್ಟಪಟ್ಟು, ಬೆವರು ಸುರಿಸಿ ಬರುವ ಹಣವೇ ಸಾಕು ನನಗೆ. ನರೇಗಾ ಯೋಜನೆ ನನಗೆ ಕೆಲಸ ಕೊಟ್ಟಿದ್ದಲ್ಲದೇ ಸಮಾಜದಲ್ಲಿ ಎಲ್ಲರಂತೆ ತಲೆಯೆತ್ತಿ ಬಾಳುವ ಶಕ್ತಿ ಕೊಟ್ಟಿದೆ.

— ರಮೇಶ ವಿರೂಪಾಕ್ಷಪ್ಪ ಕಂಬಳಿ ನರೇಗಾ ತೃತೀಯ ಲಿಂಗಿ ಫಲಾನುಭವಿ

ಯಾರ ಮುಂದೆಯೂ ಕೈಯೊಡ್ಡದೆ ಶ್ರಮದಾನ ಮಾಡುತ್ತಿರುವ ರಮೇಶ ಕಂಬಳಿ ಅವರ ಬದುಕು ಮಾದರಿಯಾಗಿದೆ. ಇಂತಹ ಕಾಯಕ ಯೋಗಿಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಅಗತ್ಯವಿರುವ ವೈಯಕ್ತಿಕ ಆಸ್ತಿ ಸೃಜನೆ ಮತ್ತು ಆರ್ಥಿಕ ನೆರವಿನ ಸೌಲಭ್ಯಗಳನ್ನು ಒದಗಿಸಲಾಗುವುದು.

— ಸಿ.ಆರ್. ಮುಂಡರಗಿ, ಉಪ ಕಾರ್ಯದರ್ಶಿ ಜಿಪಂ ಗದಗ