JOBS CUT ಮುಳಗುಂದ ಪಟ್ಟಣದಲ್ಲಿ ಬೀರಲಿಂಗೇಶ್ವರ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಾಲುಮತ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಸನ್ಮಾನಿಸಲಾಯಿತು. ಫಕೀರಯ್ಯ ಅಮೋಘಿಮಠ, ಮಹಾಂತೇಶ ನೀಲಗುಂದ, ಮಲ್ಲಪ್ಪ ಕುಂದಗೋಳ, ಇತರರಿದ್ದರು.
ಮುಳಗುಂದ: ಸಾಧನೆಗೆ ಮೊದಲು ಪ್ರಯತ್ನ ಬೇಕು (JOBS CUT). ಪ್ರಯತ್ನ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸತತ ಅಧ್ಯಯನ, ಪರಿಶ್ರಮ ಯಾರು ಮಾಡುತ್ತಾರೆ ಅವರು ಯಶಸ್ಸು ಕಾಣುತ್ತಾರೆ ಎಂದು ಆರ್.ಎನ್. ದೇಶಪಾಂಡೆ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಎಂ. ಕಲ್ಲನಗೌಡರ ಹೇಳಿದರು.
ಪಟ್ಟಣದ ಕುರಬಗೇರಿ ಓಣಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಬೀರಲಿಂಗೇಶ್ವರ ಸೇವಾ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಹಾಲುಮತ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ತಂತ್ರಜ್ಞಾನ ಬದಲಾದಂತೆ ಹುದ್ದೆಗಳು ಕಡಿತಗೊಳ್ಳುತ್ತವೆ ಎಂಬ ಭಯ ಎಲ್ಲರಲ್ಲೂ ಆವರಿಸಿದೆ. ಆದರೆ, ಆ ಭಯ ಬೇಡ. ಮನುಷ್ಯನಿಲ್ಲದೆ ಯಾವುದೇ ತಂತ್ರಜ್ಞಾನ ಸಾಗುವುದಿಲ್ಲ ಎಂದು ಹೇಳಿದರು.
ಹಾಲುಮತ ಸಮಾಜದವರು ನಿಸರ್ಗದ ಅಧ್ಯಯನಶೀಲರು. ಒಂದು ಸಮಾಜ ಜಾಗೃತಿಯಾದಲ್ಲಿ ಆ ಸಮಾಜ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ. ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು. ಗುರು- ಹಿರಿಯರ ಮಾರ್ಗದರ್ಶನ ಪಡೆದರೆ ಸೋಲು ಸುಳಿಯದು ಎಂದು ತಿಳಿಸಿದರು.
ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಬೀರಲಿಂಗೇಶ್ವರ ಸೇವಾ ಸಮಿತಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಧನೆಯ ಕಡೆ ಗಮನ ಹರಿಸಿ ಅದಕ್ಕೆ ಬೇಕಾದ ಮಾರ್ಗದರ್ಶನ ಪಡೆದುಕೊಂಡು ನಿರಂತರ ಕಲಿಕೆಯಲ್ಲಿ ತೊಡಗಿ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕು ಎಂದರು.
ಡಾ. ಎಸ್.ಸಿ. ಚವಡಿ ಮಾತನಾಡಿ, ಮಕ್ಕಳು ಹಿರಿಯರನ್ನು ಗೌರವಿಸಬೇಕು. ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಬದಲಾದ ದಿನಗಳಲ್ಲಿ ಕಾಲಕ್ಕೆ ತಕ್ಕಂತೆ ಹೋಗಬೇಕು. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದರೆ ಅವಕಾಶಗಳು, ಪ್ರೋತ್ಸಾಹ ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ಬಡತನ ಸಮಸ್ಯೆಯಲ್ಲ, ಅದರಿಂದ ಹೊರಗೆ ಬರಬೇಕಾದ ಮಾರ್ಗ ಕಂಡುಕೊಳ್ಳಬೇಕು. ಅದಕ್ಕೆ ಶಿಕ್ಷಣವೇ ಮಾರ್ಗ ಎಂದು ತಿಳಿಸಿದರು.
ನಿವೃತ್ತ ಆರ್‌ಟಿಒ ಅಧಿಕಾರಿ ಬಿ.ಡಿ. ಹರ್ತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜದ ಗುರುಗಳಾದ ಫಕೀರಯ್ಯ ಅಮೋಘಿಮಠ, ಮುಖಂಡರಾದ ಮಹಾಂತೇಶ ನೀಲಗುಂದ, ಮಲ್ಲಪ್ಪ ಕುಂದಗೋಳ, ಬಸವರಾಜ ಬಡ್ನಿ, ಬಿ.ವಿ. ಸುಂಕಾಪುರ, ಅಶೋಕ ಹುಣಸಿಮರದ, ಬಸವರಾಜ ಹಾರೋಗೇರಿ ಇತರರು ಪಾಲ್ಗೊಂಡಿದ್ದ್ದರು.