ಗಜೇಂದ್ರಗಡ: ತಾಲೂಕಿನ ಸೂಡಿ ಗ್ರಾಮದ ಪ್ರಸಿದ್ಧ ಜೋಡು ಕಳಸದ ಗುಡಿ ಮತ್ತು ನಾಗಕುಂಡ ಪುಸ್ಕರಣಿಯ ಬೃಹತ್ ಗಣಪತಿ ದೇವಸ್ಥಾನದಲ್ಲಿ ನಡೆದ ನಿಧಿ ಶೋಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಕೋಟುಮಚಗಿ ಗ್ರಾಮದ ಉಮೇಶ ಕವಲೂರ, ರೋಣದ ಯಮನೂರಸಾಬ್ ನದಾಫ್ ಮತ್ತು ಆಸೀಫ್ ನಾಲಬಂದ, ಬಾಗಲಕೋಟೆ ಜಿಲ್ಲೆಯ ಚಿಕ್ಕನಾಳ ಗ್ರಾಮದ ಲೈನ್‌ಮನ್ ಹಣಮಂತ ತಿಪ್ಪಣ್ಣವರ, ಗುಡೂರ ಗ್ರಾಮದ ಕಳಕಪ್ಪ ಕಂಟೆಕರ್, ಕುಷ್ಟಗಿ ತಾಲೂಕು ಜೂಲಕಟ್ಟಿ ಗ್ರಾಮದ ಆಂಜನೇಯ ಚನ್ನದಾಸರ ಬಂಧಿತರು.
ನಿಧಿ ಆಸೆಗಾಗಿ ನಿಧಿಗಳ್ಳರು ಭೂಮಿ ಅಗೆದು ಗಣಪತಿ ಹೊಟ್ಟೆಯೊಡೆದು ನಿಧಿ ಹುಡುಕಾಟ ಮಾಡಿದ್ದರು. ಈ ಕುರಿತು ವಿಜಯವಾಣಿ ಪತ್ರಿಕೆಯೂ ವರದಿ ಪ್ರಕಟಿಸಿ ಪೊಲೀಸ್ ಇಲಾಖೆಗೆ ಎಚ್ಚರಿಸಿತ್ತು. ಈ ಸಂಬಂದ ಧಾರವಾಡ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಉಮೇಶ ಶಿವಪ್ಪ ಬಾಲಾಜಿ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತಂಡ ರಚಿಸಿ ಶೋಧ ಕಾರ್ಯ ನಡೆಸಿ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾರೆ.