ಕುಷ್ಟಗಿ, ನರಗುಂದ ಮಾರ್ಗವಾಗಿ ಘಟಪ್ರಭಾವರೆಗೆ ನೂತನ ರೈಲು ಮಾರ್ಗ ನಿರ್ಮಿಸುವಂತೆ ಶಾಸಕ ಸಿ.ಸಿ. ಪಾಟೀಲ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ದೆಹಲಿಯಲ್ಲಿ ಮಂಗಳವಾರ ಮನವಿ ಸಲ್ಲಿಸಿದರು. ಶಾಸಕ ಎಂ.ಆರ್. ಪಾಟೀಲ ಇದ್ದರು.
- ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಶಾಸಕ ಸಿ.ಸಿ. ಪಾಟೀಲ ಮನವಿ
ನರಗುಂದ: ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ ಘಟಪ್ರಭಾವರೆಗೆ ನೂತನ ರೈಲು ಮಾರ್ಗ ನಿರ್ಮಿಸಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ದೆಹಲಿಯಲ್ಲಿ ಮಂಗಳವಾರ ಮನವಿ ಸಲ್ಲಿಸಿದರು. ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯದ ಪ್ರಯಾಣಿಕರಿಗೆ ಪ್ರಮುಖ ಸಂಪರ್ಕ ಸೇತುವೆಯಾಗಿ ಮಾರ್ಪಡಲಿದೆ. ಕುಷ್ಟಗಿ-ಘಟಪ್ರಭಾ ನೂತನ ರೈಲು ಮಾರ್ಗ ರಚನೆಯಿಂದ ಕೊಪ್ಪಳ, ಗಜೇಂದ್ರಗಡ, ರೋಣ, ನರಗುಂದ, ಸವದತ್ತಿ, ಯಲ್ಲಮ್ಮನಗುಡ್ಡ, ಗೋಕಾಕ, ಘಟಪ್ರಭಾವರೆಗಿನ ಹಲವಾರು ಧಾರ್ಮಿಕ, ಶೈಕ್ಷಣಿಕ, ವಾಣಿಜ್ಯ, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಕೂಕ ಕಲ್ಪಿಸಿದಂತಾಗುತ್ತದೆ. ಈ ಮಾರ್ಗದ ಹತ್ತಾರು ಹಳ್ಳಿಗಳ ಆರ್ಥಿಕ, ಕೃಷಿ, ಸಾಮಾಜಿಕ ಚಟುವಟಿಕೆಗಳನ್ನು ಸುಧಾರಿಸುವುದರ ಜತೆಗೆ ಜನಸಾಮಾನ್ಯರ ಸುಗಮ ಸಂಚಾರಕ್ಕೆ ಕೇಂದ್ರ ಸರ್ಕಾರದಿಂದ ಸುಸಜ್ಜಿತ ವ್ಯವಸ್ಥೆ ಒದಗಿಸಿಕೊಟ್ಟಂತಾಗಲಿದೆ. ಪರಿಣಾಮ ಉತ್ತರ ಕರ್ನಾಟಕದ ಬಹುದಿನಗಳ ಮಹತ್ವದ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಸಿ.ಸಿ. ಪಾಟೀಲ ಮನವಿಯಲ್ಲಿ ತಿಳಿಸಿದ್ದಾರೆ.