ನರಗುಂದ ಪಟ್ಟಣದಲ್ಲಿರುವ ಹುತಾತ್ಮ ರೈತನ ವೀರಗಲ್ಲು.
ಬಾರದ ನೀರಿಗೆ ಬಂಡಾಯ ನಡೆದು ಜು.21ಕ್ಕೆ 46 ವರ್ಷ ಗತಿಸಲಿದೆ. ಆದರೆ, ಈ ಭಾಗದ ರೈತರ ಜ್ವಲಂತ ಸಮಸ್ಯೆಗಳು ಮಾತ್ರ ಇಂದಿಗೂ ಈಡೇರುತ್ತಿಲ್ಲ. ಈ ಹಿಂದೆ ಕಾಲುವೆ ನೀರಿಗಾಗಿ ನಡೆದ ಹೋರಾಟ ಇಂದು ಮಹದಾಯಿ, ಕಳಸಾ ಬಂಡೂರಿಗಾಗಿ ನಡೆಸಲಾಗುತ್ತಿದೆ. ಆದರೆ, ರಾಜಕಾರಣಿಗಳು ಮಾತ್ರ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಅಸಹಾಯಕ ಸ್ಥಿತಿಯಲ್ಲಿರುವ ರೈತರಿಗೆ ಸಂಘಟನಾತ್ಮಕ ಬಲವಿಲ್ಲದೆ ಯೋಜನೆ ಜಾರಿಗೆ ಸಾಕಷ್ಟು ಹಿನ್ನೆಡೆ ಉಂಟಾಗುತ್ತಿದೆ.
ಏನಿದು ರೈತ ಬಂಡಾಯ: 1979ರಲ್ಲಿ ಸಂಪೂರ್ಣ ಬರಗಾಲ ಬಿದ್ದು ಕಾಲುವೆಗಳಿಂದ ರೈತರ ಜಮೀನುಗಳಿಗೆ ನೀರು ಬರುವುದು ನಿಂತು ಹೋಯಿತು. ಆಗ ಈ ಭಾಗದ ರೈತರು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಜಯಧರ ಹತ್ತಿ, ಗೋವಿನಜೋಳ ಬೆಲೆಯೂ ಇಳಿಕೆಗೊಂಡಿದ್ದರಿಂದ ರೈತರು ಸಂಪೂರ್ಣ ಕಂಗಾಲಾಗಿದ್ದರು. ರೈತರು ಕಷ್ಟದ ಪರಿಸ್ಥಿತಿಯಲ್ಲಿದ್ದರೂ ಅಂದಿನ ಆರ್.ಆರ್. ಗೂಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಾರದ ನೀರಿಗೆ ನೀರಿನ ಕರ (ಬೆಟರ್‌ಮೆಂಟ್ ಲೇವಿ) ಕಾಯ್ದೆ ಜಾರಿಗೆ ತಂದಿತ್ತು. ಇದರಿಂದ ಆಕ್ರೋಶಗೊಂಡ ನರಗುಂದ, ನವಲಗುಂದ, ಸವದತ್ತಿ, ರಾಮದುರ್ಗ, ಬಾದಾಮಿ ಭಾಗದ ರೈತರು ಹೋರಾಟಕ್ಕೆ ತಯಾರಾಗಿದ್ದರು. ಹೋರಾಟದ ನೇತೃತ್ವವನ್ನು ಮಲಪ್ರಭಾ ರೈತ ಹೋರಾಟ ಸಮನ್ವಯ ಸಮಿತಿ ವಹಿಸಿಕೊಂಡಿತ್ತು. ಬೆಟರ್‌ಮೆಂಟ್ ಲೇವಿ ರದ್ದುಪಡಿಸಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ ಹೋರಾಟ ಪ್ರಾರಂಭಿಸಲಾಗಿತ್ತು.
6 ತಿಂಗಳು ನಡೆದ ಅಂದಿನ ಹೋರಾಟಕ್ಕೆ ಸರ್ಕಾರ ಕಿಂಚಿತ್ತೂ ಸ್ಪಂದಿಸಿರಲಿಲ್ಲ. ಯಾವ ಪ್ರತಿಭಟನೆಗೂ ಜಗ್ಗದೆ ಇದ್ದಾಗ 1980 ಜುಲೈ 21 ರಂದು ಬಂದ್ ಕರೆ ನೀಡಲಾಯಿತು. ರೈತರು ಪ್ರತಿಭಟನೆ ಮೂಲಕ ಬ್ಯಾಂಕ್, ಅಂಚೆ ಕಚೇರಿ ಬಂದ್ ಮಾಡಿಸುತ್ತಿದ್ದರು. ಕೆಲ ರೈತರು ತಹಸೀಲ್ದಾರ್ (ಇಂದಿನ ಪುರಸಭೆ) ಕಚೇರಿಗೆ ಅಡ್ಡಲಾಗಿ ಮಲಗಿದ್ದರು. ಅಂದಿನ ತಹಸೀಲ್ದಾರ್ ಎಫ್.ಎಸ್. ವರೂರ ರೈತರನ್ನು ದಾಟಿ ಕಚೇರಿಗೆ ಪ್ರವೇಶ ಮಾಡಿದ್ದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾತಿಗೆ ಮಾತು ಬೆಳೆದು ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದಾಗ ಅಂದಿನ ಪಿಎಸ್‌ಐ ಸಿಕಂದರ್ ಪಟೇಲ ಹಾರಿಸಿದ ಗುಂಡೇಟಿಗೆ ತಾಲೂಕಿನ ಚಿಕ್ಕನರಗುಂದ ಗ್ರಾಮದ ಯುವರೈತ ವೀರಪ್ಪ ಕಡ್ಲಿಕೊಪ್ಪ ಸ್ಥಳದಲ್ಲಿಯೇ ಮೃತಪಟ್ಟರು. ನವಲಗುಂದ ತಾಲೂಕಿನಲ್ಲಿ ಅಳಗವಾಡಿಯ ಬಸಪ್ಪ ಲಕ್ಕುಂಡಿ ಹುತಾತ್ಮರಾದರು. ಆಕ್ರೋಶಗೊಂಡ ರೈತರು ಮೇಳಿ (ಕೃಷಿ ಪರಿಕರಗಳಿಂದ) ಸಿಕ್ಕಸಿಕ್ಕವರನ್ನು ಥಳಿಸಿದರು. ಪಿಎಸ್‌ಐ ಸಿಕಂದರ್ ಪಟೇಲ್ ಸೇರಿ ಅನೇಕ ಪೊಲೀಸ್ ಪೇದೆಗಳು ಸಾವನ್ನಪ್ಪಿದರು. ಅಧಿಕಾರಿಗಳು ಹೋರಾಟ ಸ್ಥಳದಿಂದ ಪಲಾಯನಗೈದರು. ಆಕ್ರೋಶಭರಿತ ರೈತರ ಮೇಳಿ ಹೊಡೆತಕ್ಕೆ ಅಂದಿನ ತಹಸೀಲ್ದಾರ್ ಫಕೀರಪ್ಪ ವರೂರ ಅವರ ಕಿವಿ ತುಂಡಾಗಿ ನೇತಾಡ ತೊಡಗಿತ್ತು. ಗೋಲಿಬಾರ್‌ನಲ್ಲಿ ಅನೇಕರು ಗಾಯಗೊಂಡಿದ್ದರು. ನೂರಾರು ರೈತರನ್ನು ಬಂಧಿಸಲಾಯಿತು. ಇದರ ಸ್ಮರಣಾರ್ಥವಾಗಿ ಪ್ರತಿವಷರ್ ಜು.21 ರಂದು ನರಗುಂದದಲ್ಲಿ ರೈತ ಹುತಾತ್ಮ ದಿನ ಆಚರಿಸಲಾಗುತ್ತಿದೆ. ಹುತಾತ್ಮ ರೈತನ ಹಾಗೂ ಮಹದಾಯಿ, ಕಳಸಾ-ಬಂಡೂರಿ ಹೋರಾಟದ ಹೆಸರಿನಲ್ಲಿ ಕೆಲ ರಾಜಕಾರಣಿಗಳು ಉನ್ನತ ಹುದ್ದೆಗಳನ್ನು ಅನುಭವಿಸಿದ್ದಾರೆ. ಆದರೆ, ರೈತರ ವಿಷಯದಲ್ಲಿ ಮಾತ್ರ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಖೇದಕರ ಸಂಗತಿ.