ನರಗುಂದದಲ್ಲಿ ಹಿಂಗಾರು ಹಂಗಾಮಿನ ಕಡಲೆಕಾಳು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಶಾಸಕ ಸಿ.ಸಿ. ಪಾಟೀಲ ಸೋಮವಾರ ಚಾಲನೆ ನೀಡಿದರು. ಎ.ಎಂ. ಹುಡೇದ, ರಾಘವೇಂದ್ರ ಸಜ್ಜನ, ಚಂದ್ರು ದಂಡಿನ, ಎಂ.ಎಚ್. ತಿಮ್ಮನಗೌಡ್ರ, ಇತರರಿದ್ದರು. 
ಗದಗ

bengalgramme ಕಡಲೆ ಖರೀದಿ ಕೇಂದ್ರದ ಅನುಕೂಲ ಪಡೆಯಿರಿ

ನರಗುಂದ: ಕೇಂದ್ರ ಸರ್ಕಾರ 16 ವಿವಿಧ ಜಿಲ್ಲೆಗಳ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ 1.01 ಲಕ್ಷ ಮೆಟ್ರಿಕ್ ಟನ್ ಕಡಲೆ ಕಾಳು ಖರೀದಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ. ತಾಲೂಕಿನ ರೈತರು ಮಹತ್ವದ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಮಾರಾಟ ಮಳಿಗೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಆರಂಭಿಸಿದ ಕಡಲೆ ಕಾಳು ಖರೀದಿ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. 
ಕೇಂದ್ರ ಸರ್ಕಾರ ರೈತರಿಂದ ಖರೀದಿಸುವ ಪ್ರತಿ ಕ್ವಿಂಟಾಲ್ ಕಡಲೆಗೆ ಗರಿಷ್ಠ 5,875 ರೂ. ಬೆಲೆ ನಿಗದಿಪಡಿಸಿದೆ. ಪ್ರತಿ ಎಕರೆಗೆ ಗರಿಷ್ಟ 4 ಕ್ವಿಂಟಾಲ್‌ನಂತೆ ಪ್ರತಿಯೊಬ್ಬ ರೈತರಿಂದ 40 ಕ್ವಿಂಟಾಲ್ ಕಡಲೆ ಖರೀದಿಸಲಾಗುತ್ತದೆ. ಗುಣಮಟ್ಟದ ಕಡಲೆ ಕಾಳನ್ನು ಖರೀದಿಸಲು ನಾಫೆಡ್ ಸಂಸ್ಥೆ, ಎನ್‌ಸಿಸಿಎಫ್ ಸಂಸ್ಥೆಗಳನ್ನು ಕೇಂದ್ರ ಸರ್ಕಾರದ ಸಂಸ್ಥೆಗಳನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಮಿಯಿತ ಕಲಬುರಗಿ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ಗುರುತಿಸಲಾಗಿದೆ. 80 ದಿನಗಳವರೆಗೆ ನೋಂದಣಿಗೆ ಆವಕಾಶವಿದೆ. 90 ದಿನಗಳಲ್ಲಿ ನೋಂದಣಿ ಜತೆಗೆ ಎಲ್ಲ ರೈತರ ಉತ್ಪನ್ನ ಖರೀದಿಸುವಂತೆ ಸೂಚಿಸಿದೆ ಎಂದರು.
ನರಗುಂದ ಟಿಎಪಿಸಿಎಂಎಸ್, ಬಾಬಾಸಾಹೇಬ ರೈತ ಉತ್ಪಾದಕ ಕಂಪನಿ, ತಾಲೂಕಿನ ಚಿಕ್ಕನರಗುಂದ, ಸುರಕೋಡ, ಸಂಕದಾಳ, ಶಿರೋಳ, ಕೊಣ್ಣೂರ, ಹಿರೇಕೊಪ್ಪ, ಜಗಾಪೂರ, ಖಾನಾಪುರ ಮತ್ತು ಗಂಗಾಪೂರ 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಒಳಗೊಂಡಂತೆ ಜಿಲ್ಲೆಯ ಒಟ್ಟು 70 ವಿವಿಧ ಖರೀದಿ ಕೇಂದ್ರಗಳಲ್ಲಿ ಕಡಲೆ ಕಾಳು ಖರೀದಿ ಕೇಂದ್ರಕ್ಕೆ ಅನುಮತಿ ನೀಡಿದೆ. ರೈತರಿಂದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕ ಪಡೆದು ನಿಗದಿತ ಅವಧಿಯಲ್ಲಿ ಉತ್ಪನ್ನ ಖರೀದಿಸಿದ ಬಳಿಕ ಡಿಬಿಟಿ ಮೂಲಕ ತಕ್ಷಣವೇ ಹಣ ಪಾವತಿಸಬೇಕೆಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. 
ಟಿಎಪಿಸಿಎಂಎಸ್ ಅಧ್ಯಕ್ಷ ಅಜ್ಜಪ್ಪ ಹುಡೇದ, ವೈ.ಆರ್. ಗೌಡಪ್ಪಗೌಡ್ರ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ, ಎಂ.ಎಚ್.ತಿಮ್ಮನಗೌಡ್ರ, ಶಂಕರಗೌಡ ಯಲ್ಲಪ್ಪಗೌಡ್ರ, ಮಲ್ಲಪ್ಪ ಮೇಟಿ, ಶಂಕ್ರಪ್ಪ ಹೂಗಾರ, ಶಿವಾನಂದ ಮುತವಾಡ, ಬಾಪುಗೌಡ ಪಾಟೀಲ, ರಾಜುಗೌಡ ಪಾಟೀಲ, ಸಂಗಪ್ಪ ಪೂಜಾರ, ಗುರಪ್ಪ ಆದೆಪ್ಪನವರ, ಮಂಜುನಾಥ ಆನೇಗುಂದಿ, ಜಯಪ್ರಕಾಶ ಕಂಠಿ, ಚಂದ್ರು ದಂಡಿನ, ಬಿ.ಎಚ್. ಕಡ್ಲಿಕೊಪ್ಪ, ಪವಾಡೆಪ್ಪ ವಡ್ಡಿಗೇರಿ, ಹನುಮಂತ ಹವಾಲ್ದಾರ, ಬಸವರಾಜ ಹೊಸಮನಿ, ಮಹಾಂತೇಶ ಗುಂಡಳ್ಳಿ, ಶರಣಪ್ಪ ಘಾಟಗೆ, ಯಲ್ಲಪ್ಪಗೌಡ ಪಾಟೀಲ, ಎಸ್.ಆರ್. ಪಾಟೀಲ, ಅನಿಲ ಧರಿಯಣ್ಣವರ, ಪ್ರಕಾಶಗೌಡ ತಿರಕನಗೌಡ್ರ, ಮಾಬುಸಾಬ್, ಇತರರಿದ್ದರು.