ಮುಂಡರಗಿಯಲ್ಲಿ ಸೋಮವಾರ ಏರ್ಪಡಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಡಾ. ಅನ್ನದಾನೀಶ್ವರ ಶಿವಯೋಗಿಗಳು ಉದ್ಘಾಟಿಸಿದರು. ಶ್ರೀ ಮುದುಕೇಶ್ವರ ಶಿವಾಚಾರ್ಯರು, ಡಾ. ಸುಜ್ಞಾನದೇವ ಶಿವಾಚಾರ್ಯರು, ಶ್ರೀ ವೀರೇಶ್ವರ ಶಿವಾಚಾರ್ಯರು, ಶ್ರೀ ರುದ್ರಮುನಿಶಿವಲಿಂಗ ಶಿವಾಚಾರ್ಯರು, ಆನಂದಸ್ವಾಮಿ ಗಡ್ಡದೇವರಮಠ, ವಿ.ಜೆ. ಹಿರೇಮಠ ಇತರರಿದ್ದರು.
- ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳ ಆಶೀರ್ವಚನ
- ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ
ಮುಂಡರಗಿ: ಮಹಾತ್ಮರ ಉತ್ಸವ ಮಾಡುವುದೊಂದೇ ಮುಖ್ಯವಲ್ಲ. ಜೀವನದಲ್ಲಿ ಅವರ ತತ್ವ ಸಿದ್ಧಾಂತ ತಿಳಿಯುವುದು ಮುಖ್ಯ. ಸಿದ್ಧಾಂತ ಶಿಖಾಮಣಿ ಅಧಿಕೃತ ಧರ್ಮಗ್ರಂಥ. ಅದರಲ್ಲಿ ಧರ್ಮತತ್ವವನ್ನು ಉತ್ತಮ ರೀತಿಯಲ್ಲಿ ಪ್ರತಿಪಾದಿಸಲಾಗಿದೆ ಎಂದು ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ತಾಲೂಕು ಶ್ರೀ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಂಸ್ಕೃತಿ, ಸಂಸ್ಕಾರ ದೊಡ್ಡದು. ಮಗು ತಾಯಿಯ ಗರ್ಭದಲ್ಲಿರುವಾಗ ಗರ್ಭಕ್ಕೆ ಲಿಂಗಧಾರಣೆ ಮಾಡಲಾಗುತ್ತದೆ. ವೀರಶೈವರು ಹುಟ್ಟುವಾಗಲೇ ಲಿಂಗಧಾರಿಯಾಗಿ ಹುಟ್ಟುತ್ತಾರೆ. ವೀರಶೈವದ ತತ್ವ ಅರಿಯಬೇಕು. ಶ್ರೀ ಮಠದಲ್ಲಿ ವೀರಶೈವ ತರಬೇತಿ ಶಿಬಿರ ನಡೆಸಲಾಗುವುದು. ಇದರಿಂದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವುದರೊಂದಿಗೆ ಅನುಭಾವದ ನುಡಿಗಳಿಂದ ಯುವಕರನ್ನು ಸರಿದಾರಿಗೆ ತರುವ ಕಾರ್ಯ ಮಾಡಲಾಗುತ್ತದೆ ಎಂದರು.
ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಒಗ್ಗಟ್ಟಿನಿಂದ ಬಾಳುವುದು ಸಮಾಜಕ್ಕೆ ದೊಡ್ಡ ಶಕ್ತಿ. ಒಗ್ಗಟ್ಟು ಇರುವಲ್ಲಿ ಶಕ್ತಿ ಇರುತ್ತದೆ. ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತ ಅರಿಯಬೇಕು. ಸಿದ್ಧಾಂತ ಶಿಖಾಮಣಿ ಜಗತ್ತಿಗಾಗಿ ನೀಡಿದ ಗ್ರಂಥ. ಜಂಗಮ ಸಮಾಜವು ಎಲ್ಲ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜಕ್ಕೆ ಗುರಿ ನೀಡಿ ಕರೆದೊಯ್ಯವ ಕೆಲಸ ಮಾಡಬೇಕು. ಜಂಗಮ ಸಮಾಜ ಸಂಸ್ಕಾರ ಕಲಿಸಿಕೊಡುವ ಸಮಾಜವಾಗಿದೆ. ಎಲ್ಲ ಸಮಾಜದಲ್ಲಿ ಬಡವರಿದ್ದಾರೆ. ಅಸಹಾಯಕರಿಗೂ ಮೀಸಲಾತಿ ದೊರೆಯಬೇಕು ಎಂದರು.
ಹಂಪಸಾಗರ ಶ್ರೀ ರುದ್ರಮುನಿಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವನನ್ನು ಮಹಾದೇವನನ್ನಾಗಿಸುವ ಪರಂಪರೆ ವೀರಶೈವ ಪರಂಪರೆ. ಜಂಗಮ ಮೂರ್ತಿಗಳು ಸಮಾಜಕ್ಕೆ ಮಾರ್ಗದರ್ಶಿ. ಆಚಾರ ವಿಚಾರವಂತರಾಗಿ ಕರ್ತವ್ಯ ನಿಷ್ಠೆ ಹೊಂದಬೇಕು. ಮೌಲ್ಯಯುತ ತತ್ವ ಇರುವಂತ ಧರ್ಮ ವೀರಶೈವ. ವೀರಶೈವ ಧರ್ಮ ದೇಹವನ್ನು ದೇವಾಲಯ ಮಾಡಿದ ಧರ್ಮವಾಗಿದೆ. ರೇಣುಕಾಚಾರ್ಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ವಿ.ಜೆ. ಹಿರೇಮಠ ಮಾತನಾಡಿದರು. ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಮುದುಕೇಶ್ವರ ಸ್ವಾಮೀಜಿ, ಡಾ. ಕುಮಾರಸ್ವಾಮಿ ಹಿರೇಮಠ ಇದ್ದರು. ಕಾರ್ಯಕ್ರಮದಲ್ಲಿ ಅನ್ನದಾನಿ ಹಿರೇಮಠ, ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರನ್ನು ಸನ್ಮಾನಿಸಲಾಯಿತು.
ಸಂಘದ ಯುವ ಘಟಕದ ಅಧ್ಯಕ್ಷ ವಿನಯ ಗಂಧದ ಮಾತನಾಡಿದರು. ಸರಸ್ವತಿ ನವಲಿಹಿರೇಮಠ ಸ್ವಾಗತಿಸಿದರು. ಶಕುಂತಲಾ ಹಂಪಿಮಠ, ಪಿ.ಡಿ. ಹಿರೇಮಠ ನಿರ್ವಹಿಸಿದರು.