ನರಗುಂದ ತಾಲೂಕು ಅರಿಷಿಣಗೋಡಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕೋತಿಯನ್ನು ಗ್ರಾಮಸ್ಥರು ಮೆರವಣಿಗೆ ಮೂಲಕ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದರು.
ನರಗುಂದ: ಹೊಟ್ಟೆಪಾಡಿಗಾಗಿ ಅಲೆದಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ತೀವ್ರ ಆಘಾತಕ್ಕೀಡಾಗಿ ಮೃತಪಟ್ಟ ಕೋತಿಗೆ ಅರಿಷಿಣಗೋಡಿ ಗ್ರಾಮಸ್ಥರು ಸೋಮವಾರ ವಿಶೇಷ ಭಜನಾ ಮೆರವಣಿಗೆಯೊಂದಿಗೆ ಹಿಂದೂ ವಿಧಿ-ವಿಧಾನಗಳ ಪ್ರಕಾರ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿದರು. ಆದರೆ, ತಾಯಿ ಇಲ್ಲದ ಕೊರಗಿನಲ್ಲಿ ನಾಲ್ಕು ತಿಂಗಳ ಮರಿ ಕೋತಿಯೂ ಮೃತಪಟ್ಟಿದ್ದರಿಂದ ಗ್ರಾಮಸ್ಥರು ಮಮ್ಮಲ ಮರುಗಿದರು. ಈ ಮರಿಗೆ ಸಹ ತಾಯಿಯನ್ನು ಮಣ್ಣು ಮಾಡಿದ್ದ ಸ್ಥಳದ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡಿದರು.
ಮೃತಪಟ್ಟ ಕೋತಿ ಅರಿಷಿಣಗೋಡಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಬೀಡು ಬಿಟ್ಟಿತ್ತು. ಶನಿವಾರ ಆಹಾರಕ್ಕಾಗಿ ಅಲೆಯುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ತೀವ್ರವಾಗಿ ಗಾಯಗೊಂಡಿತ್ತು. ಚಿಕ್ಕನರಗುಂದದ ಶಂಕರಗೌಡ ಪಾಟೀಲ, ಪಶು ವೈದ್ಯ ಶಿವಾನಂದ ಬಾಚಿ ಅವರು ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದ್ದರು. ಆದರೆ, ಗಾಯಾಳು ಕೋತಿ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಕೊನೆಯುಸಿರೆಳೆದಿತ್ತು. ತಾಯಿಯನ್ನು ಕಳೆದುಕೊಂಡು ಶೋಕತಪ್ತವಾದ ಮರಿ ಕೋತಿ ಯಾವುದೇ ಆಹಾರ ಸೇವಿಸದೆ ನಿತ್ರಾಣಗೊಂಡು ಮಂಗಳವಾರ ತಾಯಿಯನ್ನು ಹಿಂಬಾಲಿಸಿತು.