ನರಗುಂದ ತಾಲೂಕಿನ ಕೊಣ್ಣೂರಿನ ಕೊಳಚೆ ಮುಖ್ಯ ಕಾಲುವೆಯಲ್ಲಿ ಹೂಳು ತುಂಬಿರುವುದು.
ನರಗುಂದ: ಕಾಲುವೆ ನಿರ್ವಹಣೆ ಮಾಡದಿದ್ದರೂ ಲಕ್ಷಾಂತರ ರೂ. ಅನುದಾನ ದುರುಪಯೋಗಪಡಿಸಿಕೊಂಡ ನೀರಾವರಿ ಇಲಾಖೆ ಅಧಿಕಾರಿಯನ್ನು ರೈತರು ಗುರುವಾರ ಕೊಣ್ಣೂರು ಗ್ರಾಮದ ಕಾಮಗಾರಿ ಸ್ಥಳಕ್ಕೆ ಕರೆದೊಯ್ದು ತರಾಟೆಗೆ ತೆಗೆದುಕೊಂಡರು. ತಬ್ಬಿಬ್ಬಾದ ಕೊಣ್ಣೂರಿನ ಕೊಳಚೆ ಕಾಲುವೆ ಉಪ ವಿಭಾಗದ ಎಇಇ ಪಿ.ಇ.ನಾಗರಾಜ ಅವರು ಕೆಲಸ ಪೂರ್ಣಗೊಳಿಸಿ ಕೊಡುವುದಾಗಿ ಲಿಖಿತ ಪತ್ರ ಬರೆದುಕೊಟ್ಟರು.
ಕೊಣ್ಣೂರಿನ ಕೊಳಚೆ ಕಾಲುವೆ ಉಪ ವಿಭಾಗ ವ್ಯಾಪ್ತಿಯ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಪ್ರತಿವರ್ಷ ಕಾಲುವೆಗಳ ನಿರ್ವಹಣೆಗೆ ಲಕ್ಷಾಂತರ ರೂ. ಅನುದಾನ ಖರ್ಚಾದರೂ ರೈತರ ಜಮೀನಿಗೆ ಸರಿಯಾಗಿ ನೀರು ಹರಿದಿಲ್ಲ. ವಿಪರೀತ ಹೂಳು ತುಂಬಿದ್ದರೂ ಎಲ್ಲ ಕಾಲುವೆಗಳ ಸಮರ್ಪಕ ನಿರ್ವಹಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ್ದಾರೆ. ಈ ಬಗ್ಗೆ ಕೆಲ ಆಯ್ದ ಸ್ಥಳಗಳಲ್ಲಿ ಜೆಬಿಸಿಯಿಂದ ಕೆಲಸ ಮಾಡಿರುವ ಜಿಪಿಎಸ್ ಫೋಟೋಗಳನ್ನು ಕಚೇರಿಯ ದಾಖಲೆಗೆ ಲಗತ್ತಿಸಿ ಕೋಟ್ಯಾಂತರ ರೂ. ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ರೈತರ ಆರೋಪ.
ಬೆಳ್ಳೇರಿಯಿಂದ ಹೊಳೆಆಲೂರವರೆಗೆ 18 ಕಿಮೀ ವಿಸ್ತೀರ್ಣ ಹೊಂದಿರುವ ಕೊಣ್ಣೂರಿನ ಕೊಳಚೆ ಮುಖ್ಯ ಕಾಲುವೆ, 20 ಉಪ ಹಂಚಿಕೆ ಕಾಲುವೆಗಳಿಂದ 3300 ಹೆಕ್ಟೇರ್ ನೀರಾವರಿ ಸೌಲಭ್ಯ ಕಲ್ಪಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಕಾಲುವೆಗಳಲ್ಲಿ ಹೂಳು, ಮುಳ್ಳಿನ ಕಂಟಿ ಬೆಳೆದು ನಿಂತಿವೆ. ಕಾಲುವೆ ಪಕ್ಕದ ರಸ್ತೆ ಸಂಚಾರ ಕಷ್ಟಕರವಾಗಿದೆ. ಕಾಲುವೆ ಅಸಮರ್ಪಕ ನಿರ್ವಹಣೆಯಿಂದ ಕೆಲ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಸವಳು-ಜವಳು ಜಮೀನುಗಳಾಗಿ ಪರಿವರ್ತನೆಗೊಂಡಿವೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಇಲ್ಲದ ಸಬೂಬು ಹೇಳುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ನಡೆಗೆ ಬೇಸತ್ತ ರೈತರು ಅಂತಿಮವಾಗಿ ಕಾಲುವೆಗಳ ನಿರ್ವಹಣೆಗೆ ಬಿಡುಗಡೆಯಾದ 2 ವರ್ಷದ ಅನುದಾನದ ದಾಖಲೆಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಅಧಿಕಾರಿಗಳ ಅವ್ಯವಹಾರ ಬೆಳಕಿಗೆ ಬಂದಿದೆ. ಎರಡ್ಮೂರು ದಿನಗಳಲ್ಲಿ ಕಾಲುವೆಗಳಲ್ಲಿನ ಸಂಪೂರ್ಣ ಹೂಳು ತೆರವುಗೊಳಿಸಿ ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಿಕೊಡುವುದಾಗಿ ನಾಗರಾಜ ಅವರು ಲಿಖಿತ ಹೇಳಿಕೆ ನೀಡಿದ್ದರಿಂದ ರೈತರು ಪ್ರತಿಭಟನೆ ಹಿಂಪಡೆದರು.
ರೈತಸಂಘ, ಹಸಿರು ಸೇನೆ ತಾಲೂಕು ಅಧ್ಯಕ್ಷ ಉಮೇಶ ಮರ್ಚಪ್ಪನವರ, ಸಾಲಿಗೌಡ ಸಾಲಿಗೌಡ್ರ, ಶಂಕರಗೌಡ ಶಿರಿಯಪ್ಪಗೌಡ್ರ, ಶರಣಪ್ಪ ಕರಿಯಪ್ಪನವರ, ಮೌನೇಶ ಕೊಟ್ಟರಶೆಟ್ಟಿ, ಬಸಯ್ಯ ಚಿಕ್ಕಮಠ, ತುಳಸಿಗೇರಿ ತೋಟದ, ಶಿವನಗೌಡ ಯಲ್ಲಪ್ಪಗೌಡ್ರ, ಹಿರೇಹನುಮಂತಗೌಡ್ರ, ಇತರರಿದ್ದರು.