ಮುಂಡರಗಿ ತಾಲೂಕಿನ ವಿಠ್ಠಲಾಪುರ ಗ್ರಾಮದಿಂದ ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮಕ್ಕೆ ಜನರನ್ನು ಸಾಗಿಸುತ್ತಿರುವ ನಾಡದೋಣಿ.
ಮುಂಡರಗಿ: ತಾಲೂಕಿನ ವಿಠ್ಠಲಾಪುರ ಹಾಗೂ ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮಗಳ ನಡುವೆ ಹರಿಯುವ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ಬಂದರು ಮತ್ತು ಒಳನಾಡು ಕರ್ನಾಟಕ ಜಲ ಸಾರಿಗೆ ಮಂಡಳಿಯ ಮಿನಿ ಎಲ್‌ಸಿಟಿಯು (ನಾಡದೋಣಿ) ದುರಸ್ತಿ ಹಿನ್ನೆಲೆಯಲ್ಲಿ ಸಂಚಾರ ಬಂದಾಗಿದ್ದು, ಈ ಭಾಗದ ಜನರಿಗೆ ತೊಂದರೆಯಾಗಿದೆ.
ವಿಠ್ಠಲಾಪುರದಿಂದ ಮಾಗಳಕ್ಕೆ ತೆರಳುವುದಕ್ಕೆ ಮಿನಿ ಎಲ್‌ಸಿಟಿ (ಬೋಟ್) ಸಹಕಾರಿಯಾಗಿತ್ತು. ಈ ಭಾಗದಲ್ಲಿ ಸುಮಾರು 30 ವರ್ಷಗಳಿಂದ ಮಿನಿ ಎಲ್‌ಸಿಟಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಬೋಟ್ ಕೆಳಭಾಗದಲ್ಲಿ ತುಕ್ಕು ಹಿಡಿದು ರಂಧ್ರ ಬಿದ್ದಿದ್ದರಿಂದ ನೀರು ನುಸುಳುತ್ತಿರುವ ಕಾರಣಕ್ಕೆ 6 ತಿಂಗಳುಗಳಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸಂಬಂಧಿಸಿದ ಮಂಡಳಿಯು ಕಳೆದ 1 ತಿಂಗಳ ಹಿಂದೆಯೇ ಬೋಟ್‌ನ ಇಂಜಿನ್ ನಿರ್ವಹಣೆ, ತಳಭಾಗ ರಿಪೇರಿ ಸೇರಿ ಪೂರ್ಣ ನವೀಕರಣಕ್ಕೆ ತೆಗೆದುಕೊಂಡು ಹೋಗಲಾಗಿದೆ. ಮಿನಿ ಎಲ್‌ಸಿಟಿನಲ್ಲಿ ಒಂದು ಬಾರಿಗೆ 35 ಜನರು ಮತ್ತು 8 ಬೈಕ್‌ಗಳನ್ನು ಸಾಗಿಸಬಹುದಾಗಿದೆ. ಕನಿಷ್ಠ 20 ಜನ, 5 ಬೈಕ್ ಬಂದರೆ ಸಂಚರಿಸುತ್ತದೆ. ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತದೆ. ವಿಠ್ಠಲಾಪುರದಿಂದ ಮಾಗಳಕ್ಕೆ ತೆರಳಲು ಅರ್ಧ ಕಿ.ಮೀ. ಇದ್ದು, ಒಬ್ಬ ವ್ಯಕ್ತಿಗೆ 5 ರೂ., ಬೈಕ್‌ಗೆ 10 ರೂ. ಶುಲ್ಕ ಪಡೆಯಲಾಗುತ್ತಿದೆ. ಇಪ್ಪತ್ತು ವರ್ಷಗಳ ಮುಂಚಿನ ದಿನಗಳಲ್ಲಿ ಈ ಮಾರ್ಗದಲ್ಲಿ ಜನ ತೆಪ್ಪಗಳ ಸಹಕಾರದಿಂದ ತೆರಳಬೇಕಿತ್ತು. ಹಲವು ವರ್ಷಗಳಿಂದ ಬೋಟ್ ಸಹಕಾರಿಯಾಗಿತ್ತು.
ತಾಲೂಕಿನ ವಿವಿಧ ಗ್ರಾಮಸ್ಥರು, ಶಿರಹಟ್ಟಿ, ಹೂವಿನಹಡಗಲಿ ತಾಲೂಕಿನ ಜನ ಬೋಟ್ ಅವಲಂಬಿಸಿದ್ದಾರೆ. ಈಗ ಅದರ ಸೌಲಭ್ಯ ಬಂದಾಗಿದ್ದರಿಂದ ಹೂವಿನಹಡಗಲಿ ತಾಲೂಕಿಗೆ ಮುಂಡರಗಿಯ ಮೂಲಕ ತೆರಳಬೇಕು ಅಥವಾ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಮಾರ್ಗವಾಗಿ ಹಾವೇರಿ ಜಿಲ್ಲೆಯ ಗುತ್ತಲಕ್ಕೆ ತೆರಳಿ ಅಲ್ಲಿಂದ ಹೂವಿನಹಡಗಲಿ ಮಾರ್ಗಕ್ಕೆ ತೆರಳಬೇಕಾಗಿದೆ. ಸುಮಾರು 60-70ಕಿ.ಮೀ. ಸುತ್ತಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
"
ವಿಠ್ಠಲಾಪುರ-ಮಾಗಳ ಮಧ್ಯೆ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ಮಿನಿ ಎಲ್‌ಸಿಟಿ ರಿಪೇರಿಗೆ ಬಂದಿದ್ದರಿಂದ ಆರೇಳು ತಿಂಗಳಿಂದ ಸಂಚಾರ ಬಂದ್ ಆಗಿದೆ. ಇದರಿಂದ ಹೂವಿನಹಡಗಲಿ ಹಾಗೂ ನಮ್ಮ ತಾಲೂಕಿನ ಜನರಿಗೆ ತೊಂದರೆಯಾಗಿದೆ. ಈ ಬಗ್ಗೆ ಶಾಸಕರು ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಹೊಸ ಬೋಟ್ ತರುವುದರ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸುನೀಲ ಮಹಾಪುರುಷ, ವಿಠ್ಠಲಾಪುರ ನಿವಾಸಿ
"
ಮಿನಿ ಎಲ್‌ಸಿಟಿ ತುಕ್ಕು ಹಿಡಿದು ತಳಭಾಗ ದುರಸ್ತಿಯಾಗಿತ್ತು. ಹೀಗಾಗಿ ಅದರ ಇಂಜಿನ್ ನಿರ್ವಹಣೆ ಸೇರಿ ನವೀಕರಣಕ್ಕೆ ಕಾರವಾರ ಮುಖ್ಯ ಕಚೇರಿಯಿಂದ ಟೆಂಡರ್ ಕರೆದು ಈಗಾಗಲೇ ಕುಂದಾಪುರ ಗೊಗ್ಗಳ್ಳಿಯ ಬೋಟ್ ತಯಾರಿಕೆ ಘಟಕದಲ್ಲಿ ದುರಸ್ತಿ ಕೆಲಸ ನಡೆದಿದೆ. ಆದಷ್ಟು ಬೇಗ ನವೀಕರಣಗೊಂಡು ಆಗಸ್ಟ್ ಮೊದಲ ವಾರದಿಂದ ಬೋಟ್ ಸೇವೆ ಒದಗಿಸಿಕೊಡಲಾಗುವುದು.
— ಚಿದಾನಂದ ಶೇಷವನಾಥ, ಪ್ರಭಾರಿ ಸಹಾಯಕ ಕಡಲು ನಿರೀಕ್ಷಕ, ಬಂದರು ಮತ್ತು ಒಳನಾಡು ಕರ್ನಾಟಕ ಜಲ ಸಾರಿಗೆ ಮಂಡಳಿ ಹುಬ್ಬಳ್ಳಿ