ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಮ್ಮ ಆರಾಧ್ಯ ದೈವ ಲಕ್ಷ್ಮೇಶ್ವರದ ಲಿಂ. ಜಗದ್ಗುರು ಶ್ರೀ ವೀರಗಂಗಾಧರ ಅಜ್ಜಯ್ಯನವರ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದರು. ಶ್ರೀ ವಿಮಲರೇಣುಕ ವೀರಕ್ತಮುನಿ ಶಿವಾಚಾರ್ಯರು ಇತರರು ಇದ್ದರು.
ಲಕ್ಷ್ಮೇಶ್ವರ: ಮುಕ್ತಿಮಂದಿರ ಧರ್ಮಕ್ಷೇತ್ರ ನನ್ನ ನಂಬಿಕೆಯ ಹಾಗೂ ಹೃದಯಕ್ಕೆ ಹತ್ತಿರವಾದ ಪವಿತ್ರ ಕ್ಷೇತ್ರವಾಗಿದೆ. ಲಿಂ. ವೀರಗಂಗಾಧರ ಜಗದ್ಗುರು (ಅಜ್ಜಯ್ಯ)ಗಳ ಕರ್ತೃ ಗದ್ದುಗೆಗೆ ಈ ಹಿಂದೆ ಸಲ್ಲಿಸಿದ್ದ ಪ್ರಾರ್ಥನೆ, ಸಂಕಲ್ಪ ಈಡೇರಿದೆ. ಹೀಗಾಗಿ ದರ್ಶನ ಪಡೆದು ಹಾಗೂ ರಾಜ್ಯದಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆ ಆಗಲಿ, ರೈತರು ಮತ್ತು ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಲು ಬಂದಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಲಿಂ. ವೀರಗಂಗಾಧರ ಜಗದ್ಗುರುಗಳ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದ ಲಿಂ. ವೀರಗಂಗಾಧರ ಜಗದ್ಗುರುಗಳ ಪಾವನ ಕ್ಷೇತ್ರ ಇದಾಗಿದೆ. ಭಕ್ತ ಮತ್ತು ಭಗವಂತನ ನಡುವೆ ಪವಿತ್ರ ಬಂಧ ಬೆಸೆಯುವ ಶಕ್ತಿ ಧರ್ಮಕ್ಷೇತ್ರಕ್ಕಿದೆ ಎಂದರು.
ನಂತರ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರೊಂದಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ತ್ರಿಕೋಟಿ ಶಿವಲಿಂಗ ಸ್ಥಾಪನೆ, ಸಮುದಾಯ ಭವನ, ಅನ್ನದಾಸೋಹ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಪಡೆದ ಸಿಎಂ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬರ ಪರಿಸ್ಥಿತಿ ಗಂಭೀರ
ಜಿಲ್ಲೆಯಲ್ಲಿ ಶೇ.40ರಿಂದ 44ರಷ್ಟು ಮಳೆ ಕೊರತೆಯಾಗಿದ್ದು, ಬರ ಪರಿಸ್ಥಿತಿ ಗಂಭೀರವಾಗಿದೆ ಎಂಬುದು ಮನವರಿಕೆಯಾಗಿದೆ. ರೈತರ ಜಮೀನುಗಳಿಗೆ ತೆರಳಿ ಬೆಳೆಗಳ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ ಎಂದರು.
ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ಚರ್ಚಿಸಿ, ಸರ್ಕಾರ ನೂರು ದಿನಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ವಿವರಿಸಲು ಉದ್ದೇಶಿಸಿದ್ದೆ. ಆದರೆ, ಪ್ರತಿಪಕ್ಷದವರು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಟೀಕಿಸಿದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕರಾದ ಡಾ.ಚಂದ್ರು ಲಮಾಣಿ, ಎನ್.ಎಚ್. ಕೋನರಡ್ಡಿ, ಯಾಸೀರಖಾನ್ ಪಠಾಣ, ಶ್ರೀನಿವಾಸ ಮಾನೆ, ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಆನಂದಸ್ವಾಮಿ ಗಡ್ಡದೇವರಮಠ ಇತರರಿದ್ದರು.
ಪೂಜೆ ಸಲ್ಲಿಕೆ
ಮುಕ್ತಿಮಂದಿರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹಾಗೂ ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಶ್ರೀಕರಿವೃಷಭ ದೇಶೀಕೆಂದ್ರ ಶಿವಯೋಗೀಶ್ವರ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಅಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನೆರವೇರಿಸಿ ಬಳಿಕ ಗದ್ದುಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಅದ್ದೂರಿ ಸ್ವಾಗತ
ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ ಅವರನ್ನು ಶಿಗ್ಲಿ ನಾಕಾದಲ್ಲಿ ಕಾಂಗ್ರೆಸ್‌ನ ಅಪಾರ ಸಂಖ್ಯೆಯ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. 1.25 ಕ್ವಿಂಟಾಲ್ ತೂಕದ ಬೃಹತ್ ಸೇಬು ಹಣ್ಣಿನ ಮಾಲೆಯನ್ನು ಕ್ರೇನ್ ಮೂಲಕ ಹಾಕಿ ಕಾರ್ಯಕರ್ತರು ಅಭಿಮಾನ ಮೆರೆದರು.
ಪ್ರಮುಖರಾದ ಚನ್ನಪ್ಪ ಜಗಲಿ, ಸೋಮಣ್ಣ ಬೆಟಗೇರಿ, ಪದ್ಮರಾಜ ಪಾಟೀಲ, ಜಿ.ಆರ್. ಕೊಪ್ಪದ, ಮಹೇಶ ಲಮಾಣಿ, ದೀಪಕ ಲಮಾಣಿ, ಮಂಜುನಾಥ ಶೆರಸೂರಿ, ಮುದಕಣ್ಣ ಗದ್ದಿ, ಯಲ್ಲಪ್ಪ ಹಂಜಿ, ನೀಲಪ್ಪ ಶೆರಸೂರಿ, ಶರಣು ಗೋಡಿ, ಯಲ್ಲಪ್ಪ ತಳವಾರ, ಗೋವಿಂದಗೌಡ ಪಾಟೀಲ, ಅಫಜಲ್‌ಖಾನ್ ರಿತ್ತಿ, ವಿರೇಂದ್ರಗೌಡ ಪಾಟೀಲ, ಮುತ್ತಣ್ಣ ಗಡೆಪ್ಪನವರ, ಶಿದ್ದು ಪೂಜಾರ, ಭರತ ಬಳಿಗಾರ, ಮಂಜಣ್ಣ ಶೆರಸೂರಿ, ರಾಮಣ್ಣ ರಿತ್ತಿ, ಅಣ್ಣಪ್ಪ ರಾಮಗೇರಿ, ಬಸವರೆಡ್ಡಿ ಹನುಮರೆಡ್ಡಿ, ಕೊಟೆಪ್ಪ ವರ್ದಿ, ನೀಲಪ್ಪ ಪಡಗೇರಿ, ರಾಜು ಕುರಿ ಇತರರಿದ್ದರು.