ರೋಣ ಪಟ್ಟಣದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಶಾಸಕ ಜಿ.ಎಸ್. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಡಾ. ಕೊಟ್ರೇಶ ಬಿದರಿ, ರಂಗನಾಥಗೌಡ ಕೆಂಪಲಿಂಗನಗೌಡ್ರ, ಫಕೀರಪ್ಪ ತಟ್ಟಿಮನಿ, ಬಸವರಾಜ ಶರಣರು ಇತರರು ಇದ್ದರು.
ರೋಣ: ದಾನ, ದಾಸೋಹ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರಡ್ಡಿ ಮಲ್ಲಮ್ಮ ಅವರು ಮೋಕ್ಷದ ಮಾರ್ಗ ತೋರಿಸಿದ ಮಹಾಸಾದ್ವಿ. ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ವಿಚಾರ, ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರು ಭವನದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸದ್ಭಾವನಾ ಪೀಠದಿಂದ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಶ್ರೀಗಳು ಮಾತನಾಡಿದರು.
ದೇಗುಲ ನಿರ್ಮಾಣ ಸಂಪೂರ್ಣವಾಗಿ ಕಲ್ಲಿನಿಂದ ಕೂಡಿರಲಿ. ಶ್ರೀಮಠದ ವತಿಯಿಂದ ಹೇಮರಡ್ಡಿ ಮಲ್ಲಮ್ಮನ ಮೂರ್ತಿ ಕೊಡಿಸುವುದಾಗಿ ಶ್ರೀಗಳು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಮೌಲ್ಯ ಮತ್ತು ತತ್ವಗಳಿಗೆ ಬದ್ಧರಾಗಿ ನಡೆದುಕೊಂಡ ಹೇಮರಡ್ಡಿ ಮಲ್ಲಮ್ಮನವರು ಸಮಾಜದ ಎಲ್ಲ ಮಹಿಳೆಯರಿಗೂ ಆದರ್ಶವಾಗಿದ್ದಾರೆ. ಸಂಸಾರದ ನೋವು, ನಲಿವುಗಳನ್ನು ಅನುಭವಿಸಿದ ಮಲ್ಲಮ್ಮ, ಇತರರಿಗಿಂತ ಭಿನ್ನವಾಗಿ ನಿಲ್ಲಲು ಅವರೊಳಗಿನ ಆಧ್ಯಾತ್ಮಿಕ ಶಕ್ತಿಯೇ ಮೂಲ ಕಾರಣ ಎಂದರು.
ಡಾ. ಕೊಟ್ರೇಶ ಬಿದರಿ, ರಂಗನಾಥಗೌಡ ಕೆಂಪಲಿಂಗನಗೌಡ್ರ, ಫಕೀರಪ್ಪ ತಟ್ಟಿಮನಿ ಮಾತನಾಡಿದರು. ಬಸವರಾಜ ಶರಣರು, ಅನ್ನ ಪೂರ್ಣಮ್ಮ ಪಾಟೀಲ, ಶಶಿಕಲಾ ಪಾಟೀಲ, ಮಿಥುನ್ ಪಾಟೀಲ, ಶರಣಗೌಡ ಪಾಟೀಲ ಸರ್ಜಾಪುರ, ಕುಮಾರ ತೆಗ್ಗಿನಕೇರಿ, ಕುಬೇರಪ್ಪ ಗಡಗಿ, ಸುರೇಶ ಶಿರೋಳ, ಜಗದೀಶ ಅವರಡ್ಡಿ, ಹನುಮಂತ ಗಡಗಿ ಇತರರಿದ್ದರು.