ನರಗುಂದ ರಾಣಿಚೆನ್ನಮ್ಮ ನಗರದಲ್ಲಿರುವ ಶ್ಯಾಮಸುಂದರ ಕಾಂಬಳೆ ನಿವಾಸ  
ಗದಗ

ಬಾಗಲಕೋಟೆ ಜಿಪಂ ಸಹಾಯಕ ಕಾರ್ಯದರ್ಶಿ ಮನೆ ಮೇಲೆ LOKA ದಾಳಿ

ನರಗುಂದ: ಪಟ್ಟಣದಲ್ಲಿರುವ ಬಾಗಲಕೋಟೆ ಜಿಪಂ ಸಹಾಯಕ ಕಾರ್ಯದರ್ಶಿ ಶ್ಯಾಮಸುಂದರ ಮಾರುತಿ ಕಾಂಬಳೆ ಅವರ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು.
ಪಟ್ಟಣದ ರಾಣಿಚೆನ್ನಮ್ಮ ನಗರದಲ್ಲಿನ ಶ್ಯಾಮಸುಂದರ ಅವರ ಮನೆ, ಕಸಬಾ ಬಡಾವಣೆಯಲ್ಲಿರುವ ಸಹೋದರ ಸುರೇಶ ಕಾಂಬಳೆ ಮನೆ ಮತ್ತು ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಯಲ್ಲಿ ಅಧಿಕಾರಿಗಳು ಬೆಳಗ್ಗೆಯಿಂದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. 
ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸುರೇಶರೆಡ್ಡಿ, ಸಿಪಿಐ ಮಲ್ಲಿಕಾರ್ಜುನ ಬಿರಾದಾರ, ಸಿಬ್ಬಂದಿಗಳಾದ ಎಸ್.ಬಿ. ಬಳಬಟ್ಟಿ, ವಿ.ಜಿ. ರಾಜನಾಳ, ಬಸವರಾಜ ದೇಸಾಯಿ, ಹನುಮಂತ ಮಾಸರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. 
ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ಯಾಮಸುಂದರ ಅವರ ತಂದೆ ಮಾರುತಿ ಅವರ ಅಕಾಲಿಕ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ದೊರೆತಿತ್ತು. ನರಗುಂದ, ರಾಣೆಬೆನ್ನೂರ, ನವಲಗುಂದ, ಕಲಘಟಗಿ ಇತರೆಡೆ ತಾಪಂ ಇಒ ಆಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ಬಾಗಲಕೋಟೆ ಜಿಪಂ ಯೋಜನಾ ವಿಭಾಗದ ಸಹಾಯಕ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿದ್ದರು. ಆದರೀಗ ಆದಾಯದ ಮೂಲಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಹೊಂದಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಬಾಗಲಕೋಟೆ ಲೋಕಾಯುಕ್ತ ಪೊಲೀಸರು ಮೈ-ಕೊರೆಯುವ ಚಳಿಯಲ್ಲಿಯೇ ಬೆಳಗ್ಗೆ 6 ಗಂಟೆಯಿಂದ ದಾಖಲೆ ಪರಿಶೀಲಿಸುತ್ತಿದ್ದಾರೆ. 
ಶ್ಯಾಮಸುಂದರ ಸಹೋದರ ಸುರೇಶ ಕಾಂಬಳೆ ಅವರು ತಾಲೂಕಿನ ವಾಸನ ಗ್ರಾಪಂ ಬಿಲ್ ಕಲೆಕ್ಟರ್ ಆಗಿದ್ದಾರೆ. 
ಮಗಳಿಂದ ಕಿರಿಕ್
ಲೋಕಾಯುಕ್ತ ಅಧಿಕಾರಿಗಳು ಶ್ಯಾಮಸುಂದರ ಮನೆ ಪರಿಶೀಲನೆಗೆ ಆಗಮಿಸಿದ್ದಾಗ ಅವರ ಹಿರಿಯ ಪುತ್ರಿ ಸಂಬಂಧಿಕರಿಗೆ ಪದೇಪದೆ ಫೋನ್ ಮಾಡಿ ಕಿರಿಕಿರಿ ಮಾಡುತ್ತಿರುವುದನ್ನು ಗಮನಿಸಿದ ಲೋಕಾಯುಕ್ತರು ತಕ್ಷಣವೇ ಮೊಬೈಲ್ ಪಡೆದು ಗದರಿಸಿದ ಪ್ರಸಂಗ ಜರುಗಿತು.