ನರಗುಂದ: ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ ಘಟಪ್ರಭಾ ವರೆಗೆ ನೂತನ ರೈಲ್ವೆ (RAIL) ಮಾರ್ಗ ನಿರ್ಮಿಸುವಂತೆ ಶಾಸಕ ಸಿ.ಸಿ. ಪಾಟೀಲ ಅವರು ಮನವಿ ಮಾಡಿದ್ದಾರೆ.
ಈ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿರುವ ಅವರು, ನೂತನ ರೈಲು ಮಾರ್ಗದಿಂದ ಆಗುವ ಪ್ರಯೋಜನಗಳ ಬಗ್ಗೆ ಗಮನ ಸೆಳೆದಿದ್ದಾರೆ.
ಜನಸಂಘ, ಬಿಜೆಪಿಯ ಸ್ಥಾಪನೆ- ಬೆಳವಣಿಗೆಗೆ ಬಹುಮುಖ್ಯ ಕಾರಣರಾಗಿರುವ ಕರ್ನಾಟಕ ಕೇಸರಿ ದಿ. ಜಗನ್ನಾಥರಾವ್ ಜೋಶಿ ಹಾಗೂ ನವ ನರಗುಂದದ ನಿರ್ಮಾತೃ ದಿ. ಎಫ್.ಎಂ. ಹಸಬಿ ಅವರು, ಈ ಭಾಗದಲ್ಲಿ ರೈಲ್ವೆ ಮಾರ್ಗ ಪ್ರಾರಂಭಿಸಲು ಸಾಕಷ್ಟು ಶ್ರಮ ವಹಿಸಿದ್ದರು. 1965ರಲ್ಲಿ ಸ್ಥಾಪನೆಯಾದ ರೈಲ್ವೆ ಹೋರಾಟ ಸಮಿತಿಯೂ ಮಹತ್ವದ ಯೋಜನೆಗಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದೆ. ಆದರೆ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
250 ರಿಂದ 300 ಕಿ.ಮೀ ದೂರದ ಕುಷ್ಟಗಿ- ಘಟಪ್ರಭಾ ನೂತನ ರೈಲ್ವೆ ಮಾರ್ಗ ರಚನೆಯಿಂದ ಕೊಪ್ಪಳ, ರೋಣ, ಗಜೇಂದ್ರಗಡ, ನರಗುಂದ, ಸವದತ್ತಿ, ಯಲ್ಲಮ್ಮನ ಗುಡ್ಡ, ಗೋಕಾಕ, ಘಟಪ್ರಭಾ ವರೆಗಿನ ಹಲವಾರು ಧಾರ್ಮಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಐತಿಹಾಸಿಕ ಪ್ರವಾಸಿ ತಾಣಗಳು, ದೇವಾಲಯಗಳಿಗೆ ವರವಾಗಲಿದೆ. ಈ ಮಾರ್ಗ ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುಕೂಲಕರವಾಗಿದೆ. ಈ ಮಾರ್ಗದಲ್ಲಿ ಬರುವ ನೂರಾರು ಹಳ್ಳಿಗಳ ಆರ್ಥಿಕ, ಕೃಷಿ, ಸಾಮಾಜಿಕ ಚಟುವಟಿಕೆ ಸುಧಾರಿಸುವುದರ ಜತೆಗೆ ಬಡ, ಜನಸಾಮಾನ್ಯರ ಸುಗಮ ಸಂಚಾರಕ್ಕೆ ಕೇಂದ್ರ ಸರ್ಕಾರದಿಂದ ಸುಸಜ್ಜಿತ ವ್ಯವಸ್ಥೆ ಒದಗಿಸಿಕೊಟ್ಟಂತೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೂತನ ಮಾರ್ಗ ಕರ್ನಾಟಕವನ್ನು ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶಗಳೊಂದಿದೆ ಕಡಿಮೆ ಅಂತರದಲ್ಲಿ ಬೆಸೆಯಲಿದೆ. ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ಪ್ರಮುಖ ಸಂಪರ್ಕ ಸೇತುವೆ ಆಗಿರುವುದರಿಂದ ಉತ್ತರ ಕರ್ನಾಟಕದ ಬಹು ದಿನಗಳ ಮಹತ್ವದ ಯೋಜನೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಸಿ.ಸಿ. ಪಾಟೀಲ ಪತ್ರ ಮುಖೇನ ಆಗ್ರಹಿಸಿದ್ದಾರೆ