ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ದೇವರಡ್ಡಿ ಅಗಸನಕೊಪ್ಪ ಕೃಷಿ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಉದ್ಘಾಟಿಸಿದರು. ಎಸ್.ವಿ. ಸಂಕನೂರ, ರಾಜು ಕುರಡಗಿ, ಡಿ.ವೈ. ಹುನಗುಂದ, ಸುನೀಲ್ ಮಹಾಂತಶೆಟ್ಟರ ಇತರರು ಇದ್ದರು. 
ಗದಗ

Organic farming ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅನಿಸಿಕೆ
  • ನೈಸರ್ಗಿಕ ಕೃಷಿ ಕಾರ್ಯಾಗಾರ ಉದ್ಘಾಟನೆ
ಶಿರಹಟ್ಟಿ: ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ಭೂಮಿ ಬರಡಾಗುತ್ತಿದ್ದು, ರೈತರು ಮಣ್ಣಿನ ಫಲವತ್ತತೆ ಕಾಪಾಡಲು ಸಾವಯವ ಹಾಗೂ ಪಾರಂಪರಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.
ತಾಲೂಕಿನ ಕಡಕೋಳ ಗ್ರಾಮದ ಸಮೀಪದ ಕಪ್ಪತಗುಡ್ಡದ ತಪ್ಪಲಿನಲ್ಲಿರುವ ದೇವರಡ್ಡಿ ಅಗಸನಕೊಪ್ಪ ಕೃಷಿ ಆಶ್ರಮದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ‘ನೈಸರ್ಗಿಕ ಕೃಷಿ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ರಾಸಾಯನಿಕಗಳ ಅತಿಯಾದ ಬಳಕೆಯಿಂದ ಭೂಮಿ ಕಲುಷಿತಗೊಂಡು, ಮುಂದೆ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಕೇವಲ ಶೇ. 2.4ರಷ್ಟು ರೈತರು ಮಾತ್ರ ಸಾವಯವ ಕೃಷಿ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರದಿಂದ ಆದಾಯ ಒಮ್ಮೆಲೇ ಹೆಚ್ಚಾಗಿ ನಂತರ ಕುಸಿಯುತ್ತದೆ, ಆದರೆ, ಸಾವಯವ ಕೃಷಿಯಿಂದ ಆದಾಯ ಕ್ರಮೇಣ ಹೆಚ್ಚಾಗುತ್ತದೆ ಎಂಬ ಜಾಗೃತಿಯನ್ನು ರೈತರಲ್ಲಿ ಮೂಡಿಸಬೇಕಿದೆ ಎಂದರು.
ಇಂದಿನ ಯುವಕರು ಐಟಿ-ಬಿಟಿ ಉದ್ಯೋಗದ ವ್ಯಾಮೋಹದಲ್ಲಿದ್ದಾರೆ. ಆದರೆ, ನಗರಗಳ ಅಶುದ್ಧ ಗಾಳಿ, ಫ್ಲೋರೈಡ್‌ಯುಕ್ತ ನೀರು ಹಾಗೂ ಕಲುಷಿತ ಆಹಾರದಿಂದ ಬೇಸತ್ತು ಜನರು ಮತ್ತೆ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ಪಾರಂಪರಿಕ ಕೃಷಿಯಿಂದ ಆದಾಯ ದ್ವಿಗುಣಗೊಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ದುಡ್ಡಿನಿಂದ ಶಾಂತಿ, ಸಂತಸ ಖರೀದಿಸಲು ಸಾಧ್ಯವಿಲ್ಲ. ಕೃಷಿ ಇಲ್ಲದಿದ್ದರೆ ಮಾನವ ಜೀವನ ಶೂನ್ಯ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೃಷಿ ಉತ್ಕೃಷ್ಟ್ಟತೆಗೆ 3 ಲಕ್ಷ ಸಾವಿರ ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಭಾರತದ ಭೂಮಿಯನ್ನು ಕ್ಷಾರಮುಕ್ತವನ್ನಾಗಿ ಮಾಡಿ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ನೀಡುವುದು ಪ್ರಧಾನಿ ಮೋದಿ ಅವರ ಕನಸಾಗಿದೆ. ಮಣ್ಣಿನಲ್ಲಿ ಶೇ. 45 ಖನಿಜಾಂಶ, ಶೇ. 25 ಗಾಳಿ, ಶೇ. 25 ನೀರು ಹಾಗೂ ಶೇ. 5 ಸಾವಯವ ಅಂಶಗಳಿರುತ್ತವೆ. ಭೂಮಿಯ ಮೇಲ್ಭಾಗದ ಕೇವಲ 1 ಅಡಿ ಮಣ್ಣು ವ್ಯವಸಾಯಕ್ಕೆ ಯೋಗ್ಯವಾಗಿದ್ದು, ಅದನ್ನು ಕಾಪಾಡಿಕೊಳ್ಳುವುದು ರೈತರ ಕರ್ತವ್ಯ. ಮಣ್ಣು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ, ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಗೊಬ್ಬರ ಬಳಸಬೇಕು ಎಂದರು.
ಶಾಸಕ ಡಾ. ಚಂದ್ರು ಕೆ. ಲಮಾಣಿ ಮಾತನಾಡಿ, ನಿರಂತರವಾಗಿ ಒಂದೇ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮ ಪೋಷಕಾಂಶಗಳ ಸಮತೋಲನ ಹಾಳಾಗುತ್ತದೆ. ಮಣ್ಣಿನಲ್ಲಿರುವ ಉಪಯುಕ್ತ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳ ಸಂಖ್ಯೆ ಕಡಿಮೆಯಾಗುತ್ತದೆ. ರೈತರು ಸಮಗ್ರ ಕೃಷಿಯತ್ತ ಗಮನಹರಿಸಿದರೆ ಒಂದು ಬೆಳೆ ನಷ್ಟವಾದರೂ ಮತ್ತೊಂದು ಕೈಹಿಡಿಯುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಡಿ.ವೈ. ಹುನಗುಂದ, ಶಿರಹಟ್ಟಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಫಕೀರೇಶ ರಟ್ಟಿಹಳ್ಳಿ, ಬಸವರಾಜ ನಾವಿ, ಶಿವಪ್ರಕಾಶ ಮಹಾಜನಶೆಟ್ಟರ, ದೇವರಡ್ಡಿ ಅಗಸನಕೊಪ್ಪ, ಸರೋಜಮ್ಮ ಅಗಸನಕೊಪ್ಪ, ಸುರೇಶ ಕುಂಬಾರ, ತಿಪ್ಪಣ್ಣ ಕೊಂಚಿಗೇರಿ, ಜಾನು ಲಮಾಣಿ, ಭೀಮಸಿಂಗ ರಾಠೋಡ, ಶಂಕರ ಮರಾಠಿ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.