ಮುಂಡರಗಿ ಪಟ್ಟಣದ ಶ್ರೀ ಯಲ್ಲಮ್ಮದೇವಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 18ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.  
ಗದಗ

Women ಮಹಿಳೆಯರು ಸಾಧನೆ ಹಾದಿಯಲ್ಲಿ ಸಾಗಲಿ

ಮುಂಡರಗಿ: ನಾರಿ ಶಕ್ತಿಯು ಜಗತ್ತಿನಲ್ಲಿ ತುಂಬಾ ಪರಿಣಾಮ ಬೀರುತ್ತದೆ. Women ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಧೈರ್ಯವಂತರಾಗಿ ಜೀವನದಲ್ಲಿ ಮುನ್ನಡೆದು ಸಾಧನೆ ಹಾದಿಯಲ್ಲಿ ಸಾಗಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.
ಪಟ್ಟಣದ ಶ್ರೀ ಯಲ್ಲಮ್ಮದೇವಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಶ್ರೇಯಸ್ ಸಮೂಹ ಸಂಸ್ಥೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 18ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲೂ ಮುನ್ನಡೆ ಸಾಧಿಸಿದ್ದಾರೆ. ಜೀವನದಲ್ಲಿ ಬದಲಾವಣೆ ಕಾಣುವುದಕ್ಕೆ ಶಿಕ್ಷಣ ತುಂಬ ಅಗತ್ಯ. ಸಂಸ್ಥೆಯ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಅನುದಾನ ಕೊಡಿಸುವುದಕ್ಕೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಪತ್ರಕರ್ತ ಸಂತೋಷ ಮುರಡಿ ಮಾತನಾಡಿ, ಮಕ್ಕಳು ಶಿಕ್ಷಣವಂತರಾಗುವುದರ ಜೊತೆಗೆ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡುತ್ತೇನೆ ಎನ್ನುವ ಗುರಿ ಹೊಂದಬೇಕು. ಜೀವನದಲ್ಲಿ ಛಲ, ಗುರಿ ಹೊಂದಬೇಕು. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಶಿಕ್ಷಕರು ತೋರುವ ಸನ್ಮಾರ್ಗದಲ್ಲಿ ಸಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.
ಮಕ್ಕಳ ತಜ್ಞ ಡಾ. ಗೋಣೇಶ ಮೇವುಂಡಿ ಮಾತನಾಡಿ, ಮಕ್ಕಳು ಮೊಬೈಲ್‌ನಿಂದ ದೂರವಿರಬೇಕು. ಹೆಚ್ಚು ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರೋಗ್ಯದ ಕಡೆಗೆ ಒತ್ತು ನೀಡಬೇಕು ಎಂದರು.
ಮುಖ್ಯ ಶಿಕ್ಷಕ ರುದ್ರಪ್ಪ ತಳವಾರ ಮಾತನಾಡಿದರು. ಶ್ರೇಯಸ್ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ತಿಪ್ಪೇಸ್ವಾಮಿ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ಕಾರ್ಯಕಾರಣಿ ಸದಸ್ಯ ಸಂತೋಷ ಮುರಡಿ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಸೌಭಾಗ್ಯಲಕ್ಷ್ಮೀ ಹೊಸಮನಿ, ಮುಖ್ಯಶಿಕ್ಷಕಿ ಸೌಭಾಗ್ಯ ಜತ್ತಿ, ನಿವೃತ್ತ ಉಪನ್ಯಾಸಕ ಬಿ.ಬಿ. ಕುರಗುಂದ, ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ, ಮಕ್ಕಳು ಇತರರು ಇದ್ದರು. ಸಮಾಜ ಸೇವಕಿ ಅಶ್ವಿನಿ ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಚೈತ್ರಾ ಕುರಡಗಿ ಸ್ವಾಗತಿಸಿದರು. ಚೇತನಾ ರೋಹಿ ನಿರೂಪಿಸಿದರು. ಪುಷ್ಪಾ ಮತ್ತಾಳಿ ವಂದಿಸಿದರು.