ಲಕ್ಷ್ಮೇಶ್ವರದ ದಿ. ಯೂನಿಕ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ತಜ್ಞ ವೈದ್ಯ ಡಾ.ಪಿ.ಡಿ. ತೋಟದ ಉದ್ಘಾಟಿಸಿದರು. ರವಿ ನೀರಲಗಿ, ಈಶ್ವರ ಮೇಡ್ಲೇರಿ ಇತರರಿದ್ದರು. 
ಗದಗ

ಕನ್ನಡದ ಹಿರಿಮೆ ಉಳಿಸಿ ಬೆಳೆಸುವ ಕಾರ್ಯವಾಗಲಿ

ಪ್ರಮುಖ ಮುಖ್ಯಾಂಶಗಳು

  • ಡಾ.ಪಿ.ಡಿ. ತೋಟದ ಸಲಹೆ
  • ದತ್ತಿ ಉಪನ್ಯಾಸ ಉದ್ಘಾಟನೆ
ಲಕ್ಷ್ಮೇಶ್ವರ: ಕನ್ನಡ ಭಾಷೆ, ನೆಲ, ಜಲ ಪ್ರತಿಯೊಂದಕ್ಕೂ ಶ್ರೇಷ್ಠತೆ ಇದೆ, ಕನ್ನಡ ಕೇವಲ ಒಂದು ಭಾಷೆಯಲ್ಲ. ಅದೊಂದು ಅಸ್ಮಿತೆ. ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡದ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗರಿಂದಲೂ ಆಗಬೇಕಾಗಿದೆ ಎಂದು ಹಿರಿಯ ವೈದ್ಯ ಡಾ.ಪಿ.ಡಿ. ತೋಟದ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ದಿ ಯೂನಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡ ದತ್ತಿ ಉಪನ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡದ ಬಗ್ಗೆ ಬರೀ ಮಾತಲ್ಲೆ ಹೇಳುವುದಕ್ಕಿಂತ ಅದನ್ನು ಆಚರಣೆಯಲ್ಲಿ ತರುವ ಕಾರ್ಯ ಮಾಡಬೇಕು ಎಂದರು.
ಉಪನ್ಯಾಸಕ ರವಿ ನೀರಲಗಿ ಮಾತನಾಡಿ, ಕನ್ನಡ ಭಾಷೆಯು ಕನ್ನಡಿಗರ ಪಾಲಿಗೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಅಸ್ಮಿತೆಯ ತಳಹದಿಯಾಗಿದೆ. ಸುದೀರ್ಘ, ಶ್ರೀಮಂತ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯು ಕನ್ನಡಿಗರನ್ನು ಭಾವನಾತ್ಮಕವಾಗಿ ಒಂದುಗೂಡಿಸುವ ಮಹತ್ವದ ಶಕ್ತಿಯಾಗಿದೆ ಎಂದರು.
ಡಾ.ಪಿ.ಡಿ. ತೋಟದ ಕೊಡ ಮಾಡಿದ ದತ್ತಿ ಜಾನಪದ- ಜಾಣರ ಪದ ವಿಷಯ ಕುರಿತು ಮಾತನಾಡಿದ ಶಿಕ್ಷಕ ಸಾಹಿತಿ ಆರ್.ಎಸ್.ಪಾಟೀಲ ನಮ್ಮ ಆಚಾರ-ವಿಚಾರ, ಹಬ್ಬ-ಹರಿದಿನ, ಮತ್ತು ಮಾನವೀಯ ಸಂಬಂಧಗಳ ಮಹತ್ವವನ್ನು ಈ ಜಾನಪದ ಸಾಹಿತ್ಯ ಕಲಿಸುತ್ತದೆ. ಮೌಖಿಕ ಪರಂಪರೆಯಾದ ಇದು ಸಮಾಜವನ್ನು ಮುನ್ನಡೆಸುವ ಮಾರ್ಗವಾಗಿದೆ ಎಂದರು.
ಯೂನಿಕ್ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ದೇಶಪಾಂಡೆ ಮಾತನಾಡಿ, ವ್ಯವಹಾರಿಕ ಭಾಷೆ ಆಂಗ್ಲ ಭಾಷೆ ಇದ್ದರೂ ಅಂತರಂಗದ ಭಾಷೆಯಾಗಿ ಕನ್ನಡ ಬೇಕೇ ಬೇಕು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕು.ಚೇತನಾ ಕೋಳಿವಾಡ ಕನ್ನಡ ಭಾಷೆ ನಮ್ಮ ಅಸ್ತಿತ್ವವನ್ನು ಪ್ರತಿನಿಧಿಸುತ್ತದೆ ಎಂದರು.
ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಸುರೇಶ ತಂಗೋಡ ಜನಪದ ಸಾಹಿತ್ಯದ ಕುರಿತು ಮಾತನಾಡಿದರು.
ದತ್ತಿದಾನಿಗಳು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಕಸಾಪ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ , ಈರಣ್ಣ ಗಾಣಿಗೇರ ಹಾಗೂ ಗೌರವ ಕಾರ್ಯದರ್ಶಿ ವೀರಣ್ಣ ಅಕ್ಕೂರ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಬಿ. ಅಣ್ಣಿಗೇರಿ, ಶಶಿಕಾಂತ ಕುಂಬಾರ, ಸಿ.ಎಫ್. ಪಾಟೀಲ, ಎಲ್.ಆರ್. ಮಲಸಮುದ್ರ, ಪ್ರವೀಣ ಕುಂಬಾರ ಇತರರಿದ್ದರು.