ನರಗುಂದ ಹೈಟೆಕ್ ತರಕಾರಿ ಮಾರುಕಟ್ಟೆಯಲ್ಲಿನ ಬಾಡಿಗೆ, ಠೇವಣಿ ದರಗಳ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘದ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ಜಹಾಂಗೀರಖಾನ್ ಪಠಾಣ, ಬಸವರಾಜ ತಾವರೆ, ಚನ್ನು ನಂದಿ, ಪಾರವ್ವ ಮೇಲಿನಮನಿ ಇತರರು ಇದ್ದರು.
- ಮಾರುಕಟ್ಟೆ ಬಾಡಿಗೆ, ಠೇವಣಿ ದರ ಪರಿಷ್ಕರಿಸಿ
- ನರಗುಂದ ಪುರಸಭೆ ಮುಖ್ಯಾಧಿಕಾರಿಗೆ ವ್ಯಾಪಾರಸ್ಥರ ಮನವಿ
- ಬೀದಿ ಬದಿ ವ್ಯಾಪಾರಸ್ಥರಿಗೆ ಮುಖ್ಯಾಧಿಕಾರಿ ಸಕಾರಾತ್ಮಕ ಸ್ಪಂದನೆ
ನರಗುಂದ: ಪಟ್ಟಣದಲ್ಲಿ ನಿರ್ಮಿಸಿರುವ ಪುರಸಭೆಯ ಹೈಟೆಕ್ ತರಕಾರಿ ಮಾರುಕಟ್ಟೆ (MARKET) ಬಾಡಿಗೆ ಹಾಗೂ ಠೇವಣಿ ದರಗಳನ್ನು ಪರಿಷ್ಕರಿಸುವಂತೆ ಆಗ್ರಹಿಸಿ ನಗರದ ಬೀದಿಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘದ ಸದಸ್ಯರು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಬಡತನದಲ್ಲಿ ಜೀವನ ನಡೆಸುತ್ತಿರುವ ಬೀದಿಬದಿ ವ್ಯಾಪಾರಸ್ಥರು ರಾಜ್ಯ ಸರ್ಕಾರದ ನಿಯಮಾವಳಿಗಳ ಪ್ರಕಾರ ನೂತನ ಮಾರುಕಟ್ಟೆಯಲ್ಲಿ ನಿಗಧಿಪಡಿಸಿರುವ ಶೇ.10 ರಷ್ಟು ಹೆಚ್ಚುವರಿ ಬಾಡಿಗೆ ಮತ್ತು ಠೇವಣೆ ಹಣವನ್ನು ಭರಿಸಲು ಆರ್ಥಿಕ ಹೊರೆಯಾಗುತ್ತಿದೆ. 22 ವಾಣಿಜ್ಯ ಮಳಿಗೆ ಗೋದಾಮುಗಳಿಗೆ ಅಂದಾಜು 80 ಸಾವಿರ ರೂ. ಠೇವಣಿ ಹಾಗೂ ಪ್ರತಿ ತಿಂಗಳು 2300 ರೂ. ಬಾಡಿಗೆ ನಿಗದಿಪಡಿಸಿದೆ. ಹೈಟೆಕ್ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ಸಣ್ಣ ಕಟ್ಟೆಗಳಿಗೆ 32,332 ರೂ, ದೊಡ್ಡ ಕಟ್ಟೆಗಳಿಗೆ 62,670 ರೂ. ಠೇವಣಿ ಭರಿಸುವುದರ ಜತೆಗೆ ಸಣ್ಣ ಕಟ್ಟೆಗಳಿಗೆ ಪ್ರತಿ ತಿಂಗಳು 950 ರೂ, ದೊಡ್ಡ ಕಟ್ಟೆಗಳಿಗೆ 1700 ರೂ. ಬಾಡಿಗೆ ದರ ನಿಗದಿಪಡಿಸಿದ್ದು, ಆರ್ಥಿಕ ಹೊರೆಯಾಗಿಸಿದೆ. ಸಣ್ಣ ಬೀದಿಬದಿ ವ್ಯಾಪಾರಿಗಳು ಜೀವನ ನಡೆಸುವುದು ಕೂಡ ಕಷ್ಟಕರವಾಗುತ್ತದೆ. ತಕ್ಷಣವೇ ದರಗಳ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಮಾತನಾಡಿ, ಪಟ್ಟಣ ಮಾರಾಟ ಸಮಿತಿ ಮತ್ತು ವ್ಯಾಪಾರಸ್ಥರ ಮನವಿ ಮೇರೆಗೆ ಹೈಟೆಕ್ ತರಕಾರಿ ಮಾರುಕಟ್ಟೆಯಲ್ಲಿನ ದೊಡ್ಡ ಕಟ್ಟೆಗಳಿಗೆ 10 ಸಾವಿರ, ಸಣ್ಣ ಕಟ್ಟೆಗಳಿಗೆ 8 ಸಾವಿರ ರೂ, ಠೇವಣಿ ನಿಗಧಿಪಡಿಸಲಾಗುತ್ತದೆ. ದೊಡ್ಡ ಕಟ್ಟೆಗಳಿಗೆ ಪ್ರತಿ ತಿಂಗಳು 900 ರೂ, ಸಣ್ಣ ಕಟ್ಟೆಗಳಿಗೆ 600 ರೂ, ಪರಿಷ್ಕರ ದರದಂತೆ ಒಂದು ವರ್ಷದ ಬಾಡಿಗೆ ಹಣವನ್ನು ಪುರಸಭೆಗೆ ಮುಂಗಡ ಪಾವತಿಸಿ ರಸೀದಿ ಪಡೆದುಕೊಳ್ಳುವ ಲಿಖಿತ ಕರಾರಿನ ಮನವಿ ಪತ್ರವನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಆಕಸ್ಮಾತ್ ದರ ಪರಿಷ್ಕರಣಿ ಆಗದಿದ್ದರೆ ಸರ್ಕಾರ ಹಾಗೂ ಮೇಲಧಿಕಾರಿಗಳ ನಿರ್ದೇಶನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಪಟ್ಟಣದ ಹೈಟೆಕ್ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ 110 ಕಟ್ಟೆ ನಿರ್ಮಿಸಲಾಗಿದೆ. 40 ಕಟ್ಟೆಗಳನ್ನು ನೋಂದಾಯಿತ ವ್ಯಾಪಾರಸ್ಥರಿಗೆ ನೀಡಲಾಗುತ್ತದೆ. ಇನ್ನುಳಿದ ಕಟ್ಟೆಗಳನ್ನು ಬೀದಿಬದಿ ವ್ಯಾಪಾರಸ್ಥರಿಗೆ ನೀಡುವ ಬಾಡಿಗೆ ದರದಂತೆಯೇ ರೈತರಿಗೆ ನೀಡಲಾಗುವುದು. ಈ ಕುರಿತು ಯಾರೊಬ್ಬರೂ ತಕರಾರು ಎತ್ತುವಂತಿಲ್ಲ. ತರಕಾರಿ ಮಾರುಕಟ್ಟೆ ಹೊರತುಪಡಿಸಿದರೆ ಇನ್ನುಳಿದ ಯಾವುದೇ ಸ್ಥಳಗಳಲ್ಲಿ ತರಕಾರಿ ಮಾರಾಟ ಮಾಡುವಂತಿಲ್ಲ. ಎಂದಿನಂತೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕಾಯಿಪಲ್ಲೆ ಹರಾಜು (ಸವಾಲು) ಪ್ರಕ್ರಿಯೆ ನಡೆಸಿಕೊಳ್ಳಬೇಕು. ಪ್ರತಿ ಬುಧವಾರ ವಾರದ ಸಂತೆ ನಡೆಯುತ್ತದೆ. 110 ವ್ಯಾಪಾರ ಕಟ್ಟೆಗಳು ತುಂಬಿದ ಬಳಿಕ ಪುರಸಭೆಯಿಂದ ಗುರುತಿಸಿದ ನಿಗಧಿತ ಸ್ಥಳದಲ್ಲಿಯೇ ತರಕಾರಿ ಮಾರಾಟ ಮಾಡಬೇಕು. ಯಾರೊಬ್ಬರೂ ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟ ಮಾಡಬಾರದು. ಹೈಟೆಕ್ ಮಾರುಕಟ್ಟೆ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಸಬ್ ರಿಜಿಸ್ಟರ್, ಅಧಿಕಾರಿಗಳ ನಿರ್ದೇಶನದಂತೆ 22 ತರಕಾರಿ ಗೋದಾಮಿನ ಹರಾಜಿಗೆ ಎಲ್ಲರನ್ನು ಆಹ್ವಾನಿಸಲಾಗುತ್ತದೆ. ಹೆಚ್ಚಿನ ಬೆಲೆಗೆ ಲೀಲಾವು ಕೂಗುವವರಿಗೆ ಗೋದಾಮಿನ ಬಾಡಿಗೆ ನೀಡಲಾಗುವುದು ಎಂದು ತಿಳಿಸಿದರು.
ಜಹಾಂಗೀರಖಾನ್ ಪಠಾಣ, ಬಸವರಾಜ ತಾವರೆ, ಚನ್ನು ನಂದಿ, ಪಾರವ್ವ ಮೇಲಿನಮನಿ, ಮಂಜುನಾಥ ಕುಂಕುಮಗಾರ, ಮಣಿಕಂಠ ಬೆಳದಡಿ, ಮೋದಿನಸಾಬ ಪರಾಸ್, ಚಾಂದಬಿ ಪರಾಸ್, ರಿಯಾನಾ ಕಲಬುರ್ಗಿ, ಮಮ್ತಾಜ್ ಪರಾಸ್, ಎಸ್.ಎಂ.ನಾಲಬಂದ, ಎಂ.ಎಂ. ಅತ್ತಾರ, ಸಿ.ಆರ್.ಬಾಣಕಾರ, ರಾಯೇಸಾಬ ಬಡಗೇರ, ಎಂ.ಎಚ್.ಸಕಲಿ, ಮುತ್ತಪ್ಪ ಕಲಾಲ, ಇತರರಿದ್ದರು.