ವಿಪ ಸದಸ್ಯ ಲಿಂಗರಾಜಗೌಡ ಪಾಟೀಲ, ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಭಾನುವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಸ್‌ಐಆರ್ ಫಾರ್ಮ್ ವಿತರಿಸಲಾಯಿತು. ಗಂಗಾಧರ ಮೆಣಸಿನಕಾಯಿ, ಮಹೇಂದ್ರ ಬೆಟಗೇರಿ ಸಂತೋಷ ಲಮಾಣಿ ಇತರರಿದ್ದರು. 
ಗದಗ

Organization ಬೂತ್‌ಮಟ್ಟದಲ್ಲಿ ಸಂಘಟನೆ ಬಲಗೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಸದಸ್ಯ ಲಿಂಗರಾಜಗೌಡ ಪಾಟೀಲ ಸಲಹೆ
  • ಎಸ್‌ಐಆರ್ ಫಾರ್ಮ್ ಭರ್ತಿ ಮಹಾ ಅಭಿಯಾನಕ್ಕೆಚಾಲನೆ
ಲಕ್ಷ್ಮೇಶ್ವರ: ಭಾರತೀಯ ಜನತಾ ಪಕ್ಷದ ಶಕ್ತಿ ಕಾರ್ಯಕರ್ತರು ಮತ್ತು ಬೂತ್ ಮಟ್ಟದ ಸಂಘಟನೆಯಲ್ಲಿದೆ. ಪ್ರತಿಯೊಂದು ಬೂತ್‌ನಲ್ಲಿ ಸಂಘಟನೆ ಸಕ್ರಿಯವಾಗಿದ್ದರೆ ಪಕ್ಷದ ಚಟುವಟಿಕೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲಿವೆ ಎಂದು ವಿಧಾನ ಪರಿಷತ್ ಸದಸ್ಯ ಲಿಂಗರಾಜಗೌಡ ಪಾಟೀಲ ಹೇಳಿದರು.
ಎಸ್‌ಐಆರ್ ಕಾರ್ಯ ಯಶಸ್ವಿಗೊಳಿಸುವ ಉದ್ದೇಶದಿಂದ ರಾಮಗೇರಿ ಗ್ರಾಮದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಾಲಯ ಉದ್ಘಾಟನೆ ಹಾಗೂ ಎಸ್‌ಐಆರ್ ಫಾರ್ಮ್ ಭರ್ತಿ ಮಹಾ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಭಿಯಾನದ ನೇತೃತ್ವ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಮಹತ್ವದ್ದಾಗಿದೆ. ಅರ್ಹ ಮತದಾರರೆಲ್ಲರೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಎಸ್‌ಐಆರ್ ಫಾರ್ಮ್ ಭರ್ತಿ ಮಾಡಬೇಕು. ಮನೆಗಳಲ್ಲಿ ಫಾರ್ಮ್ ಭರ್ತಿ ಮಾಡಲು ಸಾಧ್ಯವಾಗದವರು, ಹಿರಿಯ ನಾಗರಿಕರು ಹಾಗೂ ಶಿಕ್ಷಣ ಪಡೆದಿರದವರಿಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಸ್ಥಳದಲ್ಲಿಯೇ ನೆರವು ನೀಡಬೇಕು. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಅಭಿಯಾನದ ಅಂಗವಾಗಿ ಮುಖಂಡರು ಮತ್ತು ಕಾರ್ಯಕರ್ತರು ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮನೆ ಮನೆಗೆ ಭೇಟಿ ನೀಡಿ ಎಸ್‌ಐಆರ್ ಫಾರ್ಮ್ ಭರ್ತಿ ಕುರಿತು ಮಾಹಿತಿ ನೀಡಿದರು. ಮತದಾರರ ಪಟ್ಟಿಯ ಪರಿಷ್ಕರಣೆ, ಹೊಸ ಮತದಾರರ ಸೇರ್ಪಡೆ, ವಿವರಗಳ ತಿದ್ದುಪಡಿ ಹಾಗೂ ಅಗತ್ಯ ದಾಖಲೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಗಂಗಾಧರ ಮೆಣಸಿನಕಾಯಿ, ಮಹೇಂದ್ರ ಬೆಟಗೇರಿ, ಸಂತೋಷ ಲಮಾಣಿ, ಭೀಮಣ್ಣ ಯಂಗಾಡಿ, ದುಂಡೇಶ ಲಮಾಣಿ, ಶಂಕರ ಪೂಜಾರ, ಚನ್ನಬಸಪ್ಪ ಬೆಟಸೂರ, ಚಿದಾನಂದ ಮಲ್ಲೂರ, ರಮೇಶ ಬೆಳ್ಳಿಗಟ್ಟಿ, ಕೃಷ್ಣ ಪೂಜಾರ, ಪ್ರದೀಪ ಪಾಟೀಲ, ಬೀರಪ್ಪ ಕೆರೂರ ಇತರರಿದ್ದರು.