ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ 38 ಕೋಟಿ ರೂ.ವೆಚ್ಚದ ಬೆಣ್ಣೆಹಳ್ಳ ಹೂಳೆತ್ತುವ ಕಾಮಗಾರಿಗೆ ಶಾಸಕ ಸಿ.ಸಿ. ಪಾಟೀಲ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ನರಗುಂದ: ಬೆಣ್ಣೆಹಳ್ಳ ಪ್ರವಾಹದಿಂದ ಶಾಶ್ವತ ಮುಕ್ತಿ ಕಂಡುಕೊಳ್ಳಲು ಸರ್ಕಾರ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದೆ. ಮತಕ್ಷೇತ್ರದ farmers ರೈತರು ಯಾವುದೇ ತಕರಾರು ಮಾಡದೆ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತ, ಜಲಸಂಪನ್ಮೂಲ ಇಲಾಖೆ ವತಿಯಿಂದ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ 38 ಕೋಟಿ ರೂ. ವೆಚ್ಚದ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ 2007, 2009, 2018 ಹಾಗೂ 2019 ರಲ್ಲಿ ಸಂಭವಿಸಿದ ಬೆಣ್ಣೆಹಳ್ಳದ ಪ್ರವಾಹ ಪರಿಸ್ಥಿತಿ ಯಾರೊಬ್ಬರೂ ಮರೆಯುವಂತಿಲ್ಲ. ಭೀಕರ ಪ್ರವಾಹಕ್ಕೆ ದವಸ-ಧಾನ್ಯ, ಜನ-ಜಾನುವಾರು, ಬಟ್ಟೆ-ಬರೆಗಳೆಲ್ಲವೂ ಕೊಚ್ಟಿಕೊಂಡು ಹೋಗಿ ನೂರಾರು ಮನೆಗಳು ಕುಸಿತಗೊಂಡಿದ್ದವು.
ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳೆಲ್ಲವೂ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದವು. ದೇಶದ ಇತಿಹಾಸದಲ್ಲಿ ಯಾರೂ ಕೊಡಲಾರದಷ್ಟು ಪರಿಹಾರವನ್ನು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ್ದಾರೆ. ನಾನು ಪ್ರವಾಹದಲ್ಲಿ ತೋರಿದ ಪ್ರಾಮಾಣಿಕತೆ, ವೈಯಕ್ತಿಕ ಮನವಿ ಮೇರೆಗೆ ನರಗುಂದ ಮತಕ್ಷೇತ್ರದ 14 ವಿವಿಧ ಗ್ರಾಮಗಳ ಜತೆಗೆ ರಾಜ್ಯದ 300 ಹಳ್ಳಿಗಳ ಸಂಪೂರ್ಣ ಸ್ಥಳಾಂತರಕ್ಕೆ ಪ್ರೇರಣೆಯಾಯಿತು ಎಂದರು.
ಬೆಣ್ಣೆಹಳ್ಳ ಪ್ರವಾಹದಿಂದ ಶಾಶ್ವತ ಮುಕ್ತಿ ಕಂಡುಕೊಳ್ಳುವುದಕ್ಕಾಗಿ ನಾನು, ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು 1686 ಕೋಟಿ ರೂ. ವೆಚ್ಚದ ಬೆಣ್ಣೆಹಳ್ಳ ಸಮಗ್ರ ಯೋಜನೆ ಕಾಮಗಾರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದೇವೆ.
ಇದರಲ್ಲಿ ನರಗುಂದ ತಾಲೂಕಿನ ಬೆಣ್ಣೆಹಳ್ಳ ವ್ಯಾಪ್ತಿಯೊಳಪಡುವ 450 ಕೋಟಿ ರೂ. ವೆಚ್ಚದ ಸಮಗ್ರ ಕಾಮಗಾರಿಯೂ ಒಳಗೊಂಡಿದೆ. ಬೆಣ್ಣೆಹಳ್ಳ ಪ್ರಾರಂಭದಿಂದ ಅಂತ್ಯದವರೆಗೆ ರೂಪಿಸಲಾದ ಈ ಮಹತ್ವದ ಯೋಜನೆ ಮಂಜೂರಾದರೆ ಪ್ರವಾಹಕ್ಕೆ ಶಾಶ್ವತ ಪರಿಹಾರ ದೊರೆತಂತಾಗುತ್ತದೆ. ಪ್ರಲ್ಹಾದ ಜೋಶಿ ಅವರು ಈ ಯೋಜನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ರಾಜ್ಯ ಸರ್ಕಾರದಿಂದ ನರಗುಂದ ತಾಲೂಕಿನ 38 ಕೋಟಿ ರೂ. ಸೇರಿ ಒಟ್ಟು 200 ಕೋಟಿ ರೂ. ವೆಚ್ಚದ ಬೆಣ್ಣೆಹಳ್ಳದ ಸಮಗ್ರ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಅಭಿನಂದಿಸುತ್ತೇನೆ. ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ನೀರಾವರಿ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಎಂ. ಜಾಲಗಾರ ಮಾತನಾಡಿ, 15 ಗ್ರಾಮಗಳ ವ್ಯಾಪ್ತಿಯಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಹಳ್ಳದಲ್ಲಿ ಶೇ.45 ರಷ್ಟು ಹೂಳು ತುಂಬಿ, ಒತ್ತುವರಿ ಮಾಡಿಕೊಂಡಿದ್ದರಿಂದ ಆಗಾಗ ಪ್ರವಾಹ ಸೃಷ್ಟಿ ಆಗುತ್ತಿತ್ತು. ನರಗುಂದ ತಾಲೂಕು ವ್ಯಾಪ್ತಿಯಲ್ಲಿ 7.5 ಕಿಮೀ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಎರಡನೇ ಹಂತದ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದರು.
ಬನಹಟ್ಟಿ ರುದ್ರಸ್ವಾಮಿಮಠದ ಶ್ರೀ ಸೊಲಬಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜುಗೌಡ ಪಾಟೀಲ, ಶಿವನಗೌಡ ಕರಿಗೌಡ್ರ, ಚಂದ್ರಶೇಖರ ದಂಡಿನ ಮಾತನಾಡಿದರು. ನೀರಾವರಿ ನಿಗಮ ಎಇಇ ಸಿ.ಬಿ. ಮೋನಿಪಾಟೀಲ, ಮಹೇಶ ಓಲೇಕಾರ, ಶಿವಾನಂದ ನಾಯಕ, ಚೇತನ ಕಪ್ಪಲಿ, ಚಂದ್ರು ಜಾಧವ, ಬಿ.ಬಿ. ಕುಂಬಾರ, ಭಾಸ್ಕರಸಾಬ ನದಾಫ, ಈಶ್ವರಗೌಡ ಪಾಟೀಲ, ಪ್ರವೀಣ ಬ್ಯಾಹಟ್ಟಿ, ಗುರಪ್ಪ ಆದೆಪ್ಪನವರ, ನೀಲಪ್ಪ ಕಲ್ಲಾಪೂರ, ಚೇತನ ಪಾಟೀಲ, ಬಸಯ್ಯ ಹಿರೇಮಠ, ಇತರರು ಪಾಲ್ಗೊಂಡಿದ್ದರು.