ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಟ್ಟಡ ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಶಾಸಕ ಎಸ್.ವಿ. ಸಂಕನೂರು, ಶಿವಕುಮಾರಗೌಡ ಪಾಟೀಲ ಇತರರಿದ್ದರು.
ಶಿರಹಟ್ಟಿ: ದೇಶದ ಇತರ ರಾಜ್ಯಗಳಲ್ಲಿ ಸಹಕಾರಿ ಸಂಘ (CO OPERATIVE) ಗಳನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಮುಷ್ಟಿಯಲ್ಲಿಟ್ಟುಕೊಂಡಿವೆ. ಆದರೆ, ಸಹಕಾರಿ ರಂಗ ರಾಜಕೀಯದ ಆಯುಧವಾಗಬಾರದು. ಅದು ಅನ್ನದಾತನನ್ನು ಆರ್ಥಿಕವಾಗಿ ಸದೃಢಗೊಳಿಸುವ ಪವಿತ್ರ ಕೇಂದ್ರವಾಗಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಶ್ರೀ ಸಿ.ಸಿ. ನೂರಶೆಟ್ಟರ ಮಿಲ್‌ನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿರು.
ಪ್ರಕೃತಿಯ ವಿಕೋಪಗಳ ಮಧ್ಯೆ ಸಿಲುಕಿರುವ ರೈತರ ಬದುಕು ಒಂದು ಜೂಜಾಟದಂತಾಗಿದೆ. ರೈತನಿಗೆ ಇಂದಿಗೂ ಆಕಾಶವೇ ಮೇಲ್ಛಾವಣಿ, ನೆಲವೇ ಹಾಸಿಗೆಯಾಗಿದೆ. ರೈತರು ಯಾವುದೇ ರಾಜಕೀಯ ಪಕ್ಷದ ಬಾಲಂಗೋಚಿಗಳಲ್ಲ. ಬದಲಿಗೆ, ಎಲ್ಲ ರಾಜಕೀಯ ಪಕ್ಷಗಳೇ ರೈತರ ಹೆಸರು ಹೇಳಿಕೊಂಡು, ಅವರ ಹೆಗಲ ಮೇಲೆ ಕುಳಿತು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ ಎಂದರು.
ಕೇಂದ್ರ ಸರ್ಕಾರ ಕೃಷಿ ವಲಯ ಹಾಗೂ ಸಹಕಾರಿ ರಂಗವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಲು ನೂರಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ದೈಹಿಕ ಹಾಗೂ ಆರ್ಥಿಕವಾಗಿ ಆರೋಗ್ಯವಂತರಾಗಿ ಬಾಳಲು ಇಂತಹ ಸಹಕಾರಿ ಸಂಘಗಳು ಪ್ರೇರಕ ಶಕ್ತಿಯಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಫಕೀರಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿದರು. ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸಿದರು. ವಿಶ್ವನಾಥ ವಿ. ಕಪ್ಪತ್ತನವರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡರ, ಶಿವಪ್ರಕಾಶ ಮಹಾಜನಶೆಟ್ಟರ್, ಜಿ.ವಿ. ಪಾಟೀಲ, ಸಿ.ಸಿ. ನೂರಶೆಟ್ಟರ್, ತಿಪ್ಪಣ್ಣ ಕೊಂಚಿಗೇರಿ, ಎಲ್.ಡಿ. ಪಾಟೀಲ, ನಾಗರಾಜ ಲಕ್ಕುಂಡಿ, ಸಂದೇಶ ಗಾಣಿಗೇರ, ಸೂರ್ಯಕಾಂತ ಕಪ್ಪತ್ತನವರ, ರವಿಕಾಂತ ಅಂಗಡಿ, ಭೀಮಸಿಂಗ್ ರಾಠೋಡ, ಪ್ರಕಾಶ ಹೂಸಮನಿ, ರಾಜು ಕುರಡಗಿ ಇತರರಿದ್ದರು.