ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಕೃಷಿಕರ ಸಮ್ಮೇಳನದಲ್ಲಿ ಕನ್ಹೇರಿ ಮಠದ ಶ್ರೀಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಮಾತನಾಡಿದರು. ಶ್ರೀನಂದಿವೇರಿ ಶಿವಕುಮಾರ ಸ್ವಾಮೀಜಿ, ರುದ್ರಣ್ಣ ಗುಳಗುಳಿ, ತಿಪ್ಪಣ್ಣ ಕೊಂಚಿಗೇರಿ ಇತರರಿದ್ದರು.
- ಗೋವುಗಳ ಉಸಿರಾಟದಿಂದ ಮನುಷ್ಯನ ಶ್ವಾಸಕೋಶಕ್ಕೆ ಉತ್ತಮ
- ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಹೇಳಿಕೆ
- ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಕೃಷಿಕರ ಸಮ್ಮೇಳನ
ಶಿರಹಟ್ಟಿ: ಕೃಷಿ ಬರಿ ಕಾರ್ಯವಲ್ಲ. ಅದೊಂದು ಸಂಸ್ಕೃತಿ. ನಮ್ಮ ಜೀವನಾಡಿಯಾದ ವ್ಯವಸಾಯವನ್ನು ಕಡೆಗಣಿಸುತ್ತ ಕೇವಲ ವಾಣಿಜ್ಯ ವ್ಯವಹಾರದತ್ತ ಆಸಕ್ತಿ ವಹಿಸಿರುವುದು ಅಕ್ಷಮ್ಯ ಅಪರಾಧ. ಗೋವಿನ (cow) ಬಗ್ಗೆ ನಾವು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಅಲ್ಲದೆ, ನಮ್ಮ ಕುಟುಂಬದ ಸದಸ್ಯರಿಗೆ ಇದರ ಮಾಹಿತಿ ಕೊರತೆಯಿದೆ. ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಮಹತ್ವವನ್ನು ಅರಿಯಬೇಕಾಗಿದೆ ಎಂದು ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಕಡಕೋಳ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಗೋವು ಆಧಾರಿತ, ನಂದಿ ಆಧಾರಿತ ಕೃಷಿಕರ ಸಮ್ಮೇಳನ ಉದ್ಘಾಟಿಸಿ ಅವರು ಮತನಾಡಿದರು.
ಒಬ್ಬ ಕೃಷಿಕ ದಿನನಿತ್ಯದ ಕೃಷಿ ಬದುಕಿನಲ್ಲಿ ಮಣ್ಣು, ನೀರು, ಗಿಡಮರ, ಜಾನುವಾರುಗಳು ಮೇಲಾಗಿ ತಿಪ್ಪೆಗುಂಡಿಗಳನ್ನೂ ಕೂಡ ಗೌರವಿಸಬೇಕು. ಇದು ಕೃಷಿ ಸಂಸೃತಿ. ಪ್ರಕೃತಿ ಹಾಳುಮಾಡಿ ಸ್ವೀಕರಿಸಿದರೆ ಅದು ವಿಕೃತಿ. ಉನ್ನತೀಕರಿಸಿ ಸ್ವೀಕರಿಸಿದರೆ ಅದು ಸಂಸೃತಿ. ಕೃಷಿಕನಾದವನು ಎಲ್ಲವನ್ನೂ ಉನ್ನತೀಕರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಹೋದಾಗ ಮಾತ್ರ ಅನ್ನದಾತನಾಗಲು ಸಾಧ್ಯ ಎಂದು ಹೇಳಿದರು.
ಗೋವುಗಳ ಉಸಿರಾಟದಿಂದ ವಾಸನೆಯಿಂದ ಮನುಷ್ಯನ ಶ್ವಾಸಕೋಶ ಉತ್ತಮಗೊಳ್ಳುತ್ತದೆ. ಬಹುತೇಕ ರೋಗ ರುಜಿನುಗಳು ನಮ್ಮ ಬಳಿ ಸುಳಿಯಲು ಆಗುವದಿಲ್ಲ. ಹಸುವಿನಿಂದ ಮನುಷ್ಯನಿಗೆ ಆಗುವ ಲಾಭಗಳೇನು ಎಂಬುದನ್ನು ಮೊದಲು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಕೃಷಿ ಬಗ್ಗೆ ಇರುವ ನಿರ್ಲಕ್ಷ್ಯ ಮನೋಭಾವವನ್ನು ಕೈಬಿಡಬೇಕು ಎಂದರು.
ಶ್ರೀ ನಂದಿವೇರಿ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ರುದ್ರಣ್ಣ ಗುಳಗುಳಿ, ದೇವರಡ್ಡಿ ಅಗಸನಕೊಪ್ಪ, ರವಿಕಾಂತ ಅಂಗಡಿ, ತಿಪ್ಪಣ್ಣ ಕೊಂಚಿಗೇರಿ, ಮಂಜುನಾಥ ಮಾಗಡಿ, ನಟರಾಜ ರಾನಡೆ, ಬಸವರಾಜ ತುಳಿ, ರವಿ ಹೊಂಬಾಳಿ, ಬಸವರಾಜ ನಾವಿ, ಮಂಗಳಾ ನೀಲಗುಂದ, ಶರಣಪ್ಪ ಹರ್ಲಾಪೂರ, ಶರಣಪ್ಪ ಹೊಂಬಳ, ಚನ್ನವೀರಪ್ಪ ಕೊಂಚಿಗೇರಿ, ಧರ್ಮರಾಜ ಕೊಂಚಿಗೇರಿ ಇತರರಿದ್ದರು.