ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ನರಗುಂದ ತಾಲೂಕಿನ ಶಿಕ್ಷಕರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪಟ್ಟಣದಲ್ಲಿ ಬುಧವಾರ ಮನವಿ ಸ್ಲಲಿಸಿದರು. 
ಗದಗ

AI: ‘ಎಐ’ ಹೆಚ್ಚುವರಿ ವಿಷಯವನ್ನಾಗಿ ಬೋಧಿಸಲಿ

ಸೋಮನಾಥ ರೆಡ್ಡಿ
ನರಗುಂದ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಶಿಕ್ಷಕರ (TEACHER) ಹಾಗೂ ನೌಕರರ ಸಂಘದ ಸದಸ್ಯರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪಟ್ಟಣದಲ್ಲಿ ಬುಧವಾರ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1642 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) (AI) ವಿಷಯ ಬೋಧಿಸಲು ಆದೇಶಿಸಿರುವುದು ಸ್ವಾಗತಾರ್ಹ. ಆದರೆ, ಕನ್ನಡ ಮಾಧ್ಯಮ ಶಾಲೆಯಲ್ಲಿ ತೃತೀಯ ಭಾಷೆ ಹಿಂದಿ, ಉರ್ದು ಶಾಲೆಗಳಲ್ಲಿನ ತೃತೀಯ ಭಾಷೆ ಇಂಗ್ಲಿಷ್ ವಿಷಯ ತೆಗೆದು ಹಾಕಿ ಕೇವಲ ಎಐ ಬೋಧನೆಗೆ ಮುಂದಾಗಿರುವುದು ಖಂಡನೀಯ. ಪ್ರಸ್ತುತ ರಾಜ್ಯದ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಬೋಧಿಸಲಾಗುತ್ತಿರುವ ತೃತೀಯ ಭಾಷೆಯನ್ನು ಮುಂದುವರಿಸುವುದರ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಎಐ ವಿಷಯವನ್ನು ಹೆಚ್ಚುವರಿ ವಿಷಯವನ್ನಾಗಿ ಪ್ರಾರಂಭಿಸಲು ರಾಜ್ಯ ಸರ್ಕಾರದಿಂದ ಅನುಮತಿ ಕೊಡಿಸಬೇಕು’ ಎಂದು ಮನವಿಯಲ್ಲಿ ಕೋರಲಾಗಿದೆ.
ಎಐ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ ಭರ್ತಿ ಮಾಡಿಕೊಳ್ಳಬೇಕು. ರಾಜ್ಯಾದ್ಯಂತ ಮೊಟ್ಟೆ ದರ ಹೆಚ್ಚಾಗಿರುವುದರಿಂದ ಸರ್ಕಾರಿ ಶಾಲೆ ಶಿಕ್ಷಕರು, ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ನಿರ್ವಹಣೆ ಮಾಡುವುದು ಅತ್ಯಂತ ಕಷ್ಟಕರವಾಗಿದೆ. ಶಿಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿರುವ ಮೊಟ್ಟೆ ವ್ಯತ್ಯಾಸ ದರಗಳನ್ನು ಸರ್ಕಾರದಿಂದ ಭರಿಸಿಕೊಡಬೇಕು. ಶಿಕ್ಷಕರ ಸಂಘದ ವಿವಿಧ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕರು ಒತ್ತಾಯಿಸಿದರು.
ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರ ಸಂಘದ ಬಲವರ್ಧನೆ ಸೇರಿದಂತೆ ಪ್ರತಿಯೊಂದು ವಿಷಯಗಳ ಕುರಿತು ಬೆಂಗಳೂರಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ನರಗುಂದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಜಡ್.ಎಂ. ಖಾಜಿ, ಜಿ.ಎನ್. ದೊಡ್ಡಲಿಂಗಪ್ಪನವರ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ. ಮಲ್ಲಾಪೂರ, ರಾಘವೇಂದ್ರ ಗೆಜ್ಜಿ, ಎಸ್.ವೈ. ಪಾಟೀಲ, ಮಹೇಶ ಹಂಗನಕಟ್ಟಿ, ಎಸ್.ಐ. ಅಂಕಲಿ, ಟಿ.ಆರ್. ಸತರಡ್ಡಿ, ಎಸ್.ಆರ್. ಪಾಟೀಲ, ಶಿವಾಜಿ ಢಾಣಿ, ಎಸ್.ಎಚ್. ಬೆನ್ನೂರ, ಎಫ್.ಎಂ. ಹಾಡಕರ, ಎಸ್.ಆರ್. ಕುರಿ, ಎಸ್.ಟಿ. ಪಾಟೀಲ ಇತರರಿದ್ದರು.

ಮುಖ್ಯ ಆಯುಕ್ತರೊಂದಿಗೆ ಚರ್ಚೆ

ಸರ್ಕಾರಿ ಶಾಲೆಗಳಲ್ಲಿ ತೃತೀಯ ಭಾಷೆಯನ್ನು ತೆಗೆದು ಹಾಕುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ. ಜತೆಗೆ ತೃತೀಯ ಭಾಷೆ ಶಿಕ್ಷಕರ ನೌಕರಿಗೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿರುತ್ತದೆ. ರಾಜ್ಯದ ಪ್ರತಿಯೊಬ್ಬ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಎಲ್ಲ ಸರ್ಕಾರಿ ಶಾಲೆಗಳಲ್ಲಿ ತೃತೀಯ ಭಾಷೆಯ ಜತೆಗೆ ಎಐ ಶಿಕ್ಷಣವನ್ನು ಹೆಚ್ಚುವರಿ ವಿಷಯವನ್ನಾಗಿ ಬೋಧಿಸಲು ಆದೇಶಿಸುವಂತೆ ಬಸವರಾಜ ಹೊರಟ್ಟಿ ಅವರು ಶಿಕ್ಷಣ ಇಲಾಖೆ ಮುಖ್ಯ ಆಯುಕ್ತರಿಗೆ ದೂರವಾಣಿ ಮೂಲಕ ತಿಳಿಸಿದರು.