ಗದಗ: ಮೈಸೂರು ದಸರಾ ವೇಳೆ ಸಚಿವರಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಆಗಲೇಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಗದಗನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಶಿಸ್ತುಗೆ ತಕ್ಕದಾದ ಶಿಕ್ಷೆ ಆಗಬೇಕು. ಸೂಕ್ತವಾದ ಕಾನೂನು ಕ್ರಮ ಆಗಬೇಕು. ಮಂತ್ರಿಗಳ ಗೌರವ ಧಕ್ಕೆ ಬಂದಿರುವ ಈ ಸಂದರ್ಭದಲ್ಲಿ ಮಂತ್ರಿಗಳಿಗೆ ನೈತಿಕ ಶಕ್ತಿ ತುಂಬಬೇಕು ಎಂದರು.
ಕಾರ್ಯಕ್ರಮದಲ್ಲಿ ಮಂತ್ರಿಯನ್ನೇ ಎಸ್ಪಿ ತಡೆ ಹಿಡಿದಿದ್ದಾರೆ. ಮಂತ್ರಿಗಳೆಂದರೆ ಸರ್ಕಾರ. ಕಾರ್ಯಕ್ರಮದಲ್ಲಿ ಯಾರಿಗೆ ಅವಕಾಶ ಇದೆ, ಯಾರಿಗೆ ಅವಕಾಶ ಇಲ್ಲ ಎಂಬುದು ಮೊದಲೇ ಪೊಲಿಸ್ ಇಲಾಖೆ ತಿಳಿಸುಕೊಳ್ಳಬೇಕಿತ್ತು. ಕೆಲವರನ್ನು ಕಾರ್ಯಕ್ರಮಕ್ಕೆ ಬಿಟ್ಟಿದ್ದಾರೆ. ಇನ್ನೂ ಆದರೆ, ಸಚಿವರನ್ನು ಒಳಗೆ ಬಿಟ್ಟಿಲ್ಲ. ಈ ತಾರತಮ್ಯ ಏತಕ್ಕೆ ಎಂದು ಪ್ರಶ್ನಿಸಿದರು.
ಶಾಸಕರಾಗಿ ತಮ್ಮದೇ ಆದ ಛಾಪು ಮೂಡಿಸಿದ ನರೇಂದ್ರಸ್ವಾಮಿ ಅವರು ಈ ರಾಜ್ಯಕ್ಕೆ ಗೊತ್ತಿಲ್ಲದ ರಾಜಕಾರಣಿ ಏನಲ್ಲ. ರಾಜ್ಯದ ಕೃಷಿ ಸಚಿವರನ್ನು ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಗುರುತು ಹಿಡಿಯುದಿಲ್ಲ ಅಂದರೆ ಏನರ್ಥ? ಗುರುತು ಇದ್ದರೂ ಹೀಗೆ ವರ್ತನೆ ಮಾಡುವುದು ಸರಿನಾ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ ಬೇಸರ ವ್ಯಕ್ತಪಡಿಸಿದರು.