ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ನಿರ್ಧರಿಸಿದ್ದರಿಂದ ಲಕ್ಷ್ಮೇಶ್ವರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಆದರಹಳ್ಳಿಯ ಕುಮಾರ ಮಹಾರಾಜ ಸ್ವಾಮೀಜಿ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಎಳನೀರು ಸೇವಿಸಿ ಧರಣಿ ಸ್ಥಗಿತಗೊಳಿಸಿದರು.  
ಗದಗ

ಲಕ್ಷ್ಮೇಶ್ವರದಲ್ಲಿ ಹೋರಾಟಗಾರರಿಂದ ಸಂಭ್ರಮಾಚರಣೆ

ಲಕ್ಷ್ಮೇಶ್ವರ: ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದು ಗೋವಿನಜೋಳ ಖರೀದಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೂಟ ಮತ್ತು ಮಠಾಧೀಶರ ನೇತೃತ್ವದಲ್ಲಿ ಒಂದು ವಾರದಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರೈತರು ಧರಣಿ ಸ್ಥಳದಲ್ಲಿ ಶುಕ್ರವಾರ ಸಂಭ್ರಮಾಚರಣೆ ಮಾಡಿದರು.
ನ. 15ರಿಂದ ರೈತ ಸಂಘಟನೆಗಳು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಈ ಹೋರಾಟಕ್ಕೆ ಶಕ್ತಿಯಾಗಿ ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು ಕಳೆದ 6 ದಿನಗಳಿಂದ ಹನಿ ನೀರನ್ನೂ ಸೇವಿಸದೇ ಹೋರಾಟದ ಸ್ವರೂಪ ಬದಲಿಸಿದ್ದರು. ಇದಕ್ಕೆ ಬಾಲೇಹೊಸೂರ, ಶಿರಹಟ್ಟಿಯ ಶ್ರೀ ದಿಂಗಾಲೇಶ್ವರ ಮಹಾಸ್ವಾಮೀಜಿ, ಕುಂದಗೋಳದ ಕಲ್ಯಾಣಪುರ ಮಠದ ಬಸವಣ್ಣಜ್ಜನವರು, ಮುಕ್ತಿಮಂದಿರ, ಹೂವಿನಶಿಗ್ಲಿ, ಕರೇವಾಡಿಮಠ, ಬಟಗುರ್ಕಿಯ ಮಠಾಧೀಶರು, ಎಲ್ಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲಾಧಿಕಾರಿಗಳು, ಮಾಜಿ ಶಾಸಕರು, ಸೇರಿ ಅನೇಕರು ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಪರಿಪರಿಯಾಗಿ ಕೇಳಿದ್ದರೂ ಶ್ರೀಗಳು, ಹೋರಾಟಗಾರರು ನಿರ್ಧಾರ ಸಡಿಲಿಸಿರಲಿಲ್ಲ. ಗುರುವಾರ ರೈತ ಸಂಘಟನೆಗಳು ಎಲ್ಲ ಸಂಘಟನೆಗಳು ವ್ಯಾಪಾರಸ್ಥರು, ಸಂಘಟನೆಗಳು, ಮಠಾಧೀಶರ ಪಾಲ್ಗೊಳ್ಳುವಿಕೆಯೊಂದಿಗೆ ಲಕ್ಷ್ಮೇಶ್ವರ ಬಂದ್ ಕರೆ ಹೋರಾಟವನ್ನೂ ಸಂಪೂರ್ಣ ಯಶಸ್ವಿಯಾಗಿದ್ದರು.
ಈ ವೇಳೆ ಕಳೆದ 5 ದಿನಗಳಿಂದ ನೀರು ಇಲ್ಲದೇ ನಿತ್ರಾಣಗೊಂಡಿದ್ದರೂ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ್ದ ಮಹಾರಾಜ ಶ್ರೀಗಳನ್ನು ಗುರುವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಮುಖ್ಯಮಂತ್ರಿಗಳು ತುರ್ತು ಸಭೆ ಕರೆದು ಮೊದಲ ಹಂತದಲ್ಲಿ ರಾಜ್ಯದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂಬ ನಿರ್ಧಾರ ಪ್ರಕಟಿಸಿದರು. ಸರ್ಕಾರದ ಈ ನಿರ್ಧಾರವನ್ನು ರೈತರಿಗೆ ತಿಳಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಲು ಜಿಲ್ಲಾಧಿಕಾರಿಗಳ ತಂಡ ಜಿಲ್ಲಾಸ್ಪತ್ರೆಗೆ ತೆರಳಿ ಕುಮಾರ ಮಹಾರಾಜ ಸ್ವಾಮೀಜಿಗಳನ್ನು ಭೇಟಿ ಮಾಡಿತು. ಆಗ ಶ್ರೀಗಳು ‘ನಾನು ಪ್ರತಿಭಟನೆ ನಡೆಸುತ್ತಿದ್ದ ವೇದಿಕೆಯಲ್ಲಿಯೇ ಉಪವಾಸ ನಿಲ್ಲಿಸುತ್ತೇನೆ. ಅಲ್ಲಿಗೆ ಕರೆದೊಯ್ಯಿರಿ’ ಎಂದರು. ಆಗ ಶ್ರೀಗಳನ್ನು ಧರಣಿ ಸ್ಥಳಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಶ್ರೀಗಳು ಎಳೆನೀರು ಸೇವಿಸಿ ಓಂ ನಮಃ ಶಿವಾಯ ಮಂತ್ರ ಪಠಿಸಿ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸಿದರು. ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ನಾಗಪ್ಪ, ತಾಯಿ ಶಂಕ್ರವ್ವ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.
ಜಿಲ್ಲಾಧಿಕಾರಿ ಶ್ರೀಧರ ಸಿ.ಎನ್. ಮಾತನಾಡಿ, ರಾಜ್ಯಾದ್ಯಂತ ಸಾಂಕೇತಿಕ ಹೋರಾಟ ನಡೆಯಿತು. ಲಕ್ಷ್ಮೇಶ್ವರದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಹೋರಾಟ ಸರ್ಕಾರದ ಗಮನ ಸೆಳೆದಿದೆ. ಶುಕ್ರವಾರ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೊದಲ ಹಂತದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಗೋವಿನಜೋಳ ಖರೀದಿಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಪೂಕರವಾಗಿ ಹಣಕಾಸು ಇಲಾಖೆಯಿಂದ ಅನುಮೋದನೆ ನೀಡಲು ಸಿಎಂ ಸೂಚಿಸಿದ್ದಾರೆ. ಒಂದೆರಡು ದಿನಗಳಲ್ಲಿ ಆದೇಶವಾಗುತ್ತಿದ್ದಂತೆಯೇ ಲಕ್ಷ್ಮೇಶ್ವರದಲ್ಲಿ ಮೊದಲು ಖರೀದಿ ಕೇಂದ್ರ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್. ಮತ್ತು ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಇದ್ದರು.
ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ನಾಗರಾಜ ಚಿಂಚಲಿ, ಶರಣು ಗೋಡಿ ಬಸಣ್ಣ ಬೆಂಡಿಗೇರಿ, ಪೂರ್ಣಾಜಿ ಖರಾಟೆ, ವಕೀಲ ಎಂ.ಎಸ್. ದೊಡ್ಡಗೌಡ್ರ, ಬಟಗುರ್ಕಿಯ ಗದಗೆಯ್ಯ ದೇವರು, ಮಾಜಿ ಶಾಸಕ ರಾಮಣ್ಣ ಲಮಾಣಿ, ಮಹೇಶ ಹೊಗೆಸೊಪ್ಪಿನ, ಚಂದ್ರಣ್ಣ ಮುಂಡವಾಡ, ಶಿವಣ್ಣ ಬಂಕಾಪುರ, ಶಿವನಗೌಡ್ರ ಪಾಟೀಲ, ವೀರೇಂದ್ರಗೌಡ ಪಾಟೀಲ, ಟಾಕಪ್ಪ ಸಾತಪುತೆ, ಸೋಮಣ್ಣ ಡಾಣಗಲ್ಲ, ಅಭಯ ಜೈನ್, ದಾದಾಪೀರ್ ಮುಚ್ಛಾಲೆ, ಶಿವಾನಂದ ಲಿಂಗಶೆಟ್ಟಿ, ಗುರಪ್ಪ ಮುಳಗುಂದ, ವಿರ್ಷೂಪ್ಪ ಮುದಕಣ್ಣವರ, ಪವನ ಬಂಕಾಪುರ, ಸುರೇಶ ಹಟ್ಟಿ, ರಾಮಣ್ಣ ಗೌರಿ, ಪ್ರಕಾಶ ಕೊಂಚಿಗೇರಿಮಠ ಸೇರಿದಂತೆ ಮತ್ತಿತರರು ಇದ್ದರು.
ಹೋರಾಟ ಮುಂದುವರಿಕೆ:
ಖರೀದಿ ಕೇಂದ್ರ ತೆರೆಯುವ ಕುರಿತು ಸರ್ಕಾರದ ಅಧಿಕೃತ ಆದೇಶ ಪ್ರತಿ ಬರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಮೊದಲು ಖರೀದಿ ಕೇಂದ್ರ ಹೋರಾಟದ ವೇದಿಕೆಯಲ್ಲಿಯೇ ಉದ್ಘಾಟನೆಯಾಗಬೇಕು. ಅಲ್ಲಿಯವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುದುವರೆಸುತ್ತೇವೆ ಎಂದು ಹೋರಾಟಗಾರರು ತಿಳಿಸಿದರು.