ಲಕ್ಷ್ಮೇಶ್ವರದ ಐತಿಹಾಸಿಕ ಲಕ್ಷಾಪತಿ ಹಾಲೇವಾಡಿಮಠದಲ್ಲಿ ಜಗದ್ಗುರು ರೇಣುಕಾಚಾರ್ಯ ಮಂದಿರದ ರಜತ ಮಹೋತ್ಸವದಲ್ಲಿ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು, ಶಿವಲಿಂಗಯ್ಯ ಹಾಲೇವಾಡಿಮಠ ಕುಟುಂಬದವರು ಇದ್ದರು. 
ಗದಗ

ಇಷ್ಟಲಿಂಗ ಪೂಜೆಯಿಂದ ಕಷ್ಟ-ನಷ್ಟ-ಅನಿಷ್ಠ ದೂರ ishtaling

ಪ್ರಮುಖ ಮುಖ್ಯಾಂಶಗಳು

  • ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಆಶೀರ್ವಚನ
  • ಲಕ್ಷ್ಮೇಶ್ವರ ಹಾಲೇವಾಡಿಮಠದಲ್ಲಿ ಜಗದ್ಗುರು ರೇಣುಕಾಚಾರ್ಯ ಮಂದಿರದ ರಜತ ಮಹೋತ್ಸವ,
  • ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವ
ಲಕ್ಷ್ಮೇಶ್ವರ: ವೀರಶೈವ ಧರ್ಮ ಪರಂಪರೆಯಲ್ಲಿ ಇಷ್ಟಲಿಂಗ ಪೂಜೆಗೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ. ಇಷ್ಟಲಿಂಗ ಪೂಜೆಯಿಂದ ಕಷ್ಟ-ನಷ್ಟ-ಅನಿಷ್ಠಗಳು ದೂರವಾಗಿ ಮನುಷ್ಯನ ಆತ್ಮಬಲ, ಮನೋಬಲ ವೃದ್ಧಿಸಿ ಶಾಂತಿ, ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಐತಿಹಾಸಿಕ ಲಕ್ಷಾಪತಿ ಹಾಲೇವಾಡಿಮಠದಲ್ಲಿನ ಜಗದ್ಗುರು ರೇಣುಕಾಚಾರ್ಯ ಮಂದಿರದ ರಜತ ಮಹೋತ್ಸವ, ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವ, ಮಠದ ವಂಶಜರ ಸ್ಮರಣೆ, ಗದ್ದುಗೆಗಳ ಅನಾವರಣ ನಿಮಿತ್ತ ಶ್ರೀ ಮಠದ ಆವರಣದಲ್ಲಿ ಗುರುವಾರ ಇಷ್ಟಲಿಂಗ ವಹಾಪೂಜೆ ನೆರವೇರಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಮನುಷ್ಯ ಜೀವನದಲ್ಲಿ ಪೂಜೆ, ಧ್ಯಾನ, ಪ್ರಾರ್ಥನೆ ಎಲ್ಲರಿಗೂ ಅವಶ್ಯವಿದೆ. ವೀರಶೈವ ಲಿಂಗಾಯತರಿಗೆ ಮುಖ್ಯವಾದ ಇಷ್ಟಲಿಂಗ ಪೂಜೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ಧರ್ಮ ಪರಂಪರೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಶಿವನಿಲ್ಲದ ಸ್ಥಾನವೇ ಇಲ್ಲ, ಪರಶಿವನ ಸಂಕೇತವಾದ ಇಷ್ಟಲಿಂಗಾರ್ಚನೆಯಿಂದ ಆತ್ಮೋದ್ಧಾರ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಜನಸಮುದಾಯ ಧರ್ಮದಿಂದ ವಿಮುಖರಾಗುತ್ತಿರುವುದರಿಂದ ಜೀವನದಲ್ಲಿ ಕಷ್ಟ-ನಷ್ಟಗಳು ಎದುರಾಗುತ್ತಿವೆ ಎಂದರು.
ಧರ್ಮ ಪಾಲನೆ, ಆಚರಣೆ, ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ನೆಲೆಗಟ್ಟಿನ ಮೇಲೆ ಬದುಕು ಸಾಗಿಸಿದಾಗ ನೆಮ್ಮದಿ ಲಭಿಸುತ್ತದೆ. ಈ ನಿಟ್ಟಿನಲ್ಲಿ ವೀರಶೈವ ಧರ್ಮದವರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ವೀರಶೈವ ಧರ್ಮದ ಪವಿತ್ರ ಗ್ರಂಥವಾದ ಸಿದ್ಧಾಂತ ಶಿಖಾಮಣಿಯನ್ನು ಪ್ರತಿಯೊಬ್ಬರೂ ಅರಿತು ಇಷ್ಟಲಿಂಗ ಪೂಜೆ ಹಾಗೂ ಆಚಾರಗಳನ್ನು ರೂಢಿಸಿಕೊಂಡು ನಮ್ಮ ಧರ್ಮ ಪರಂಪರೆಗಳನ್ನು ಕಾಪಾಡಿಕೊಂಡು ಎಲ್ಲರೂ ಅಖಂಡತೆಯಿಂದ ಕೂಡಿ ಬಾಳಬೇಕು. ಪಂಚಪೀಠಗಳು ಸಂಪತ್ತು-ಶಾಂತಿ, ತ್ಯಾಗ, ವೈರಾಗ್ಯ, ನಿರ್ಮಲತೆ ಮತ್ತು ಜ್ಞಾನವನ್ನು ಪ್ರತಿನಿಧಿಸುತ್ತಿದ್ದು, ಸರ್ವ ಜನಾಂಗದ ಶ್ರೇಯೋಭಿವೃದ್ಧಿ ಕಾರ್ಯವೇ ಗುರು ಪೀಠಗಳ ಪರಮ ಧ್ಯೇಯವಾಗಿದೆ ಎಂದರು.
ಧರ್ಮ ಜಾಗೃತಿ, ಸಮಾಜದ ಕಲ್ಯಾಣಕ್ಕಾಗಿ ಹೆಸರಾದ ಹಾಲೇವಾಡಿಮಠದ ಪರಂಪರೆ ಶ್ರೇಷ್ಠವಾಗಿದ್ದು, ಶ್ರೀಮಠದ ಸೇವಾ ಕಾರ್ಯ ಶ್ಲಾಘನೀಯ. ಈ ಧರ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಶಿವಲಿಂಗಯ್ಯ ಹಾಲೇವಾಡಿಮಠ ಅವರಿಗೆ ರಂಭಾಪುರಿ ಪೀಠದಿಂದ ಗೌರವ ಪುರಸ್ಕಾರ ಮಾಡಲಾಗುವುದು ಎಂದರು.
ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆಯ ವೈಶಿಷ್ಟ್ಯಕಣ್ತುಂಬಿಕೊಳ್ಳಲು ಭಕ್ತ ಸಮೂಹ ಶ್ರೀ ಮಠದ ಆವರಣದಲ್ಲಿ ನೆರೆದಿದ್ದರು.
ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಮೈಸೂರು-ಬನ್ನಿಕೊಪ್ಪದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು, ಗಂಜೀಗಟ್ಟಿ ಡಾ. ವೈಜನಾಥ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯರು, ಕರೇವಾಡಿಮಠ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು, ಹಾಲೇವಾಡಿಮಠದ ವಂಶಜರು, ಇದ್ದರು.