ಲಕ್ಷ್ಮೇಶ್ವರದಲ್ಲಿ ಮೊಹರಂ ಹಬ್ಬದ ಅಂಗವಾಗಿ ಹರಕೆ ತೀರಿಸುವ ಭಕ್ತರಿಗೆ ಕಲಾವಿದ ಪ್ರವೀಣ ಗಾಯಕರ ಹುಲಿ ವೇಷದ ಚಿತ್ರ ಬಿಡಿಸುತ್ತಿರುವುದು.
- ಎಲ್ಲೆಡೆ ಹುಲಿ ವೇಷಧಾರಿಗಳದ್ದೇ ಅಬ್ಬರ
- ಗುರುವಾರ ಕತ್ತಲ ರಾತ್ರಿ
ಲಕ್ಷ್ಮೇಶ್ವರ: ಬರಗಾಲದ ಛಾಯೆಯ ನಡುವೆಯೂ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮೊಹರಂ ಅನ್ನು ಜೂ. 26ರಂದು ಸಂಪ್ರದಾಯಬದ್ಧವಾಗಿ ಆಚರಿಸಲು ಜನರು ಸಜ್ಜಾಗಿದ್ದಾರೆ. ಹಿಂದೂ-ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿ ಆಚರಿಸಲ್ಪಡುವ ಹಬ್ಬವು ತನ್ನ ಪರಂಪರೆ, ಆಚರಣೆ ಹಾಗೂ ಸಾಂಸ್ಕೃತಿಕ ವೈಭವವನ್ನು ಇಂದಿಗೂ ಉಳಿಸಿಕೊಂಡಿದೆ.
ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಅನ್ನು ಲಕ್ಷ್ಮೇಶ್ವರದಲ್ಲಿ ಭಕ್ತಿ, ನಂಬಿಕೆಯಿಂದ ಆಚರಿಸಲಾಗುತ್ತಿದೆ. ಧರ್ಮ ಮತ್ತು ಶಾಂತಿಗಾಗಿ ಪ್ರಾಣತ್ಯಾಗ ಮಾಡಿದ ಹಜರತ್ ಹಸೇನ್ ಹಾಗೂ ಹಜರತ್ ಹುಸೇನ್ ಅವರ ಪುಣ್ಯಸ್ಮರಣೆಯೇ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ.
ಸಂತಾನಭಾಗ್ಯ, ಕುಟುಂಬದ ಆರೋಗ್ಯ, ಸುಖ-ಸಮೃದ್ಧಿ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಹುಲಿವೇಷದ ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮ ಮಕ್ಕಳು ಹುಲಿಯಂತೆ ಶಕ್ತಿವಂತರಾಗಿ, ಆರೋಗ್ಯವಂತರಾಗಿ ಬೆಳೆಯಲಿ ಎಂಬ ನಂಬಿಕೆಯಿಂದ ಅಲಾಯಿ ದೇವರಿಗೆ 5, 11, 21 ವರ್ಷ ಅಥವಾ ಜೀವಮಾನವಿಡೀ ಹುಲಿವೇಷ ಚಿತ್ರ ಬರೆಸುವ ಹರಕೆ ಕಟ್ಟಿಕೊಳ್ಳುತ್ತಾರೆ.
ಖರೀದಿ ಜೋರು: ಕಳೆದೊಂದು ವಾರದಿಂದಲೇ ಪಟ್ಟಣದಲ್ಲಿ ಹೊಸ ಬಟ್ಟೆ, ದಿನಸಿ ಹಾಗೂ ಹಬ್ಬದ ಸಾಮಗ್ರಿಗಳ ಖರೀದಿ ಜೋರಾಗಿದೆ. ಪಟ್ಟಣ ಸೇರಿದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ 52 ನಿಗದಿತ ಸ್ಥಳಗಳಲ್ಲಿ ಪಾಂಜಾಗಳ ಪ್ರತಿಷ್ಠಾಪನೆ ಮಾಡಲಾಗಿದೆ.
ಚಿತ್ರ ಬಿಡಿಸುವ ಕುಟುಂಬ: ಪಟ್ಟಣದಲ್ಲಿ ನಾಲ್ಕು ತಲೆಮಾರಿನಿಂದ ಹುಲಿವೇಷದ ಚಿತ್ರ ಬರೆಯುವ ಕಲಾವಿದರ ಕುಟುಂಬವಿದೆ. ಕಲಾವಿದ, ಕಲಾ ಶಿಕ್ಷಕ ಪ್ರವೀಣ ಗಾಯಕರ ಹುಲಿವೇಷ ಬರೆಯುತ್ತಾರೆ. ಲಕ್ಷ್ಮೇಶ್ವರ ಮತ್ತು ಸುತ್ತಲಿನ ಗ್ರಾಮಗಳ ಜನರು ಇವರ ಬಳಿಯೇ ಹುಲಿವೇಷದ ಚಿತ್ರ ಬರಸಿಕೊಳ್ಳುತ್ತಾರೆ.
ಪ್ರತಿಯೊಂದು ಚಿತ್ರಗಳು ಒಂದೊಂದು ವಿಶೇಷ ವಿಚಾರ ಸಂಕೇತಿಸುತ್ತವೆ. ನವಿಲಿನ ಚಿತ್ರವು ಹುಲಿವೇಷಧಾರಿಯ ಕನಸು ನನಸಾಗಲಿ, ಗರಿಗೆದರಲಿ ಎಂಬುದಾಗಿದೆ. ಇಡೀ ಹುಲಿಯ ಚಿತ್ರವು ವೇಷಧಾರಿಯು ಹುಲಿಯಂತೆ ಬಲಶಾಲಿ ಆಗಲಿ ಎಂಬುದನ್ನು ಬಿಂಬಿಸುತ್ತದೆ. ಕುದುರೆ ಚಿತ್ರ ಕುದುರೆಯಂತೆ ಏಕ ಚಿತ್ತದಿಂದ ವೇಗವಾಗಿ ಯಶಸ್ಸಿನ ಕಡೆಗೆ ಸಾಗಲಿ, ಹಸ್ತದ ಚಿತ್ರ ದೇವರ ಆರ್ಶೀವಾದ ಸದಾ ಇರಲಿ, ಮೀನಿನ ಚಿತ್ರ ಚಲನಶೀಲತೆ, ಹಾವಿನ ಚಿತ್ರ ಸೇಡು-ಕೆಡಕು ತಾಗದಿರಲಿ ಎಂಬುದನ್ನು ಸಂಕೇತಿಸುತ್ತದೆ. ಕೊನೆಯಲ್ಲಿ ಚಿತ್ರಕ್ಕೆ ಮತ್ತು ವೇಷಧಾರಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂಬ ಉದ್ದೇಶದಿಂದ ನವಿಲು ಗರಿ ಕಟ್ಟಲಾಗುತ್ತದೆ. ಎಲ್ಲರ ದೃಷ್ಟಿ ನವಿಲು ಗರಿಗೆ ತಾಗುತ್ತದೆ ಎಂಬ ನಂಬಿಕೆ.
"
ಮೊಹರಂನಲ್ಲಿ ಹರಕೆ ಹೊತ್ತ ಭಕ್ತರು ಅನೇಕ ವರ್ಷಗಳಿಂದ ನಮ್ಮ ಬಳಿ ಬಂದು ಹುಲಿ, ನವಿಲು, ಕುದುರೆ, ಹಸ್ತ, ದೇವರ ಛತ್ರಿ, ಮೀನು ಹಾಗೂ ಹಾವಿನ ಚಿತ್ರಗಳನ್ನು ಬರೆಸಿಕೊಂಡು ಹೋಗುತ್ತಾರೆ. ಪ್ರವೀಣ ಗಾಯಕರಕಲಾವಿದ