ಲಕ್ಷ್ಮೇಶ್ವರ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಖರೀದಿಸುತ್ತಿರುವ ಗ್ರಾಹಕರು. 
ಗದಗ

ಮಾವಿನ ಹಣ್ಣುಗಳ ರಾಜನ ಬೆಲೆ ಕುಸಿತ mango rate

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಪ್ರಮುಖ ಮುಖ್ಯಾಂಶಗಳು

  • ಮಾವು ಪ್ರಿಯರಿಗೆ ಸಿಹಿ, ಬೆಳೆಗಾರರಿಗೆ ಕಹಿ
ಲಕ್ಷ್ಮೇಶ್ವರ: ಪಟ್ಟಣದ ಮಾರುಕಟ್ಟೆಯಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿವೆ. ಆದರೆ, ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ (ಮಾವಿನ ಹಣ್ಣು)ಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರಿಂದ ಗ್ರಾಹಕರು ಖುಷಿಪಟ್ಟರೆ, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಕಳೆಗುಂದಿದ ರಾಜನ ಮಾರುಕಟ್ಟೆ
15 ದಿನಗಳ ಹಿಂದೆ ಕೆಜಿಗೆ 200 ರೂ.ಗೂ ಹೆಚ್ಚಿಗೆ ಇದ್ದ ದರ ಇದೀಗ 50 ರಿಂದ 100 ರೂ.ಗೆ ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲಿ ಸೇಬು, ಬಾಳೆ, ದಾಳಿಂಬೆ, ಮೋಸಂಬಿ ಇತರೆಲ್ಲ ಹಣ್ಣುಗಳ ಬೆಲೆ ಹೆಚ್ಚಳವಾದರೆ ಮಾವಿನ ಹಣ್ಣಿನ ಬೆಲೆ ದಿಢೀರ್ ಕುಸಿತ ಕಂಡಿದೆ. ಇದು ಮಾವು ಪ್ರಿಯರಿಗೆ ಸಿಹಿಯಾಗಿದ್ದು, ಕೆಜಿ ಹಣ್ಣಿನ ಬೆಲೆಯಲ್ಲಿ 3/4 ಕೆಜಿ ಹಣ್ಣು ಸಿಗುತ್ತಿದ್ದು, ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರ ಕೈಯಲ್ಲಿ ಮಾವಿನ ಹಣ್ಣಿನ ಚೀಲ ಕಂಡು ಬರುತ್ತಿದೆ.  ಮಾವಿನ ಹಣ್ಣೆಂದರೆ ಎಲ್ಲರಿಗೂ ಇಷ್ಟ, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮಾವು ದೊರೆಯುತ್ತಿರುವುದರಿಂದ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಜ್ಯೂಸ್‌ಗಳ ಬೆಲೆಯಲ್ಲಿ ಸ್ಥಿರತೆ ಇದೆ. ಮಾವಿನ ಬೆಳೆ ಕ್ಷೇತ್ರ ಹೆಚ್ಚಾಗಿರುವುದು ಮತ್ತು ಈ ವರ್ಷ ಅನುಕೂಲಕರ ಹವಾಮಾನದಿಂದ ಮಾವಿನ ಉತ್ಪಾದನೆಯೂ ಹೆಚ್ಚಾಗಿದೆ. ಪರಿಣಾಮವಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಬರುತ್ತಿದೆ. ಅಲ್ಲದೆ, ಈ ಹಣ್ಣಿನ ಸೇವನೆ ದೇಹದಲ್ಲಿ ಉಷ್ಣತೆಯನ್ನುಂಟು ಮಾಡುತ್ತದೆ. ಆದ್ದರಿಂದ ಈ ವರ್ಷ ಮೊದಲೇ ಅತಿಯಾದ ಬಿಸಿಲ ತಾಪದಿಂದ ಬಳಲುತ್ತಿರುವ ಜನತೆ ಹಣ್ಣಿನ ಸೇವನೆ ಪ್ರಮಾಣ ಕಡಿಮೆ ಇದೆ. ಇದು ಕೂಡ ಬೆಲೆ ಇಳಿಕೆಗೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. 
ಲಕ್ಷ್ಮೇಶ್ವರ ಮಾರುಕಟ್ಟೆಯಲ್ಲಿ ಆಫೂಸ್, ಬಾದಾಮಿ, ರಸಪುರಿ, ತೋತಾಪುರಿ, ಕಲ್ಮಿ, ಸಿಂಧೂಲಾ, ಬೇನಿಸ್ ಸೇರಿ ವಿವಿಧ ತಳಿಯ ಮಾವಿನ ಹಣ್ಣುಗಳ ಘಮಲು ಹೆಚ್ಚಿದೆ. ಆದರೂ ಬೇಡಿಕೆ ಇಲ್ಲದ್ದರಿಂದ ಬೆಳೆಗಾರರು ಮತ್ತು ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಸಾರಿಗೆ ವೆಚ್ಚ, ಕಾರ್ಮಿಕರ ವೆಚ್ಚ ಹಾಗೂ ತೋಟ ನಿರ್ವಹಣಾ ಖರ್ಚು ಹೆಚ್ಚಿರುವ ನಡುವೆಯೇ ಬೆಲೆ ಕುಸಿತ ಬೆಳೆಗಾರರಲ್ಲಿ ಬೇಸರ ತರಿಸಿದೆ. ಬೆಳೆಗಾರರರೇ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಮುಂದಾಗಿದ್ದರಿಂದ ವ್ಯಾಪಾರಸ್ಥರು ಸ್ಪರ್ಧಾತ್ಮಕ ಬೆಲೆ ಎದುರಿಸಲಾಗದೇ ಚಡಪಡಿಸುತ್ತಿದ್ದಾರೆ. 
ಶೂನ್ಯ ಮಾಸ ಬೇಡಿಕೆ ಕುಸಿತ:
ಮದುವೆ, ಗೃಹ ಪ್ರವೇಶ, ಸೀಮಂತ ಸೇರಿ ಇತರೇ ವಿಶೇಷ ಕಾರ್ಯಕ್ರಮ, ಬೀಗರೂಟಕ್ಕೆ ಮಾವಿನ ಹಣ್ಣಿನ ಸೀಕರಣೆ ಮಾಡಲಾಗುತ್ತದೆ. ಆದರೆ, ಶೂನ್ಯ/ಅಧಿಕ ಮಾಸ ಪ್ರಾರಂಭವಾಗಿದ್ದರಿಂದ ಯಾವುದೇ ಶುಭ ಸಮಾರಂಭ, ಜಾತ್ರೆ, ಹಬ್ಬ, ಧಾರ್ಮಿಕ ಕಾರ್ಯಕ್ರಮಗಳೂ ಅಷ್ಟಕ್ಕಷ್ಟೇ. ಹೀಗಾಗಿ, ಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ. ಮಾವಿನ ಹಣ್ಣಿನ ಸೀಜನ್ ಪ್ರಾರಂಭಕ್ಕೆ ಮೊದಲೇ ಬೆಳೆಗಾರರು ಮತ್ತು ಹೋಲ್‌ಸೇಲ್ ವ್ಯಾಪಾರಸ್ಥರೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಂಡವಾಳ ಹಾಕಿರುತ್ತೇವೆ. ಬೇಡಿಕೆ ಇಲ್ಲದ್ದರಿಂದ ನೈಸರ್ಗಿಕವಾಗಿಯೇ ಹಣ್ಣುಗಳನ್ನು ಮಾಗಿಸಲಾಗುತ್ತಿದೆ. ಸುಗ್ಗಿ ಮುಗಿಯುವುದರೊಳಗೆ ಹಾಕಿದ ಬಂಡವಾಳ ಸಿಕ್ಕರೆ ಸಾಕು ಎನ್ನುತ್ತಾರೆ ಮಾವಿನ ವ್ಯಾಪಾರಸ್ಥ ಮಲೀಕ ಮುಂಡರಗಿ.
"

ಬೆಳೆ ಇದ್ದಾಗ ಬೆಲೆ ಇರುವುದಿಲ್ಲ. ಬೆಲೆ ಇದ್ದಾಗ ಬೆಳೆ ಬಂದಿರುವುದಿಲ್ಲ. ವರ್ಷ ಪೂರ್ತಿ ಶ್ರಮಪಟ್ಟು ಬೆಳೆದ ಬೆಳೆಯನ್ನು ಈಗ ಕೈಗೆ ಸಿಕ್ಕ ಬೆಲೆಗೆ ಮಾರಾಟ ಮಾಡುವುದರಿಂದ ಮಾಡಿದ ಖರ್ಚೂ ಸಿಗುತ್ತಿಲ್ಲ. ತಾಲೂಕಿನಲ್ಲಿ ಹಣ್ಣುಗಳ ಶೀಥಲೀಕರಣ ಮತ್ತು ಸಂಸ್ಕರಣಾ ಘಟಕಗಳಿಗೆ ಉತ್ತೇಜನ ನೀಡಬೇಕು. ಬೆಳೆ ಬಂದಾಗ ರೈತರಿಗೆ ನ್ಯಾಯಸಮ್ಮತ ಬೆಲೆ ಸಿಗುವಂತಾಗಬೇಕು. ಹಣ್ಣುಗಳನ್ನೂ ಬೆಂಬಲ ಬೆಲೆಯಡಿ ಖರೀದಿಸುವಂತಾಗಬೇಕು. ಬೆಲೆ ಸಂಪೂರ್ಣ ಕುಸಿತವಾಗಿದ್ದರಿಂದ ಬೆಳೆದ ತಪ್ಪಿಗೆ ನಷ್ಟದಿಂದ ಪಾರಾಗಲು ಈ ವರ್ಷ ರೈತರೇ ಮಾರುಕಟ್ಟೆಯಲ್ಲಿ ಕುಳಿತು ಚಿಲ್ಲರೇ ವ್ಯಾಪಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಂಗಪ್ಪ ಪೂಜಾರ ಬೆಳೆಗಾರ ಲಕ್ಷ್ಮೇಶ್ವರ