ಲಕ್ಷ್ಮೇಶ್ವರ ಸಮೀಪದ ಹೂವಿನಶಿಗ್ಲಿ ವಿರಕ್ತಮಠದ ಗುರುಕುಲದ ಅನಾಥ ಹಾಗೂ ಬಡ ಮಕ್ಕಳ ದಾಸೋಹಕ್ಕೆ ದಿನಸಿ ಸಾಮಗ್ರಿ ದೇಣಿಗೆ ನೀಡಿದ ಉದ್ಯಮಿ ವಿಜಯಕುಮಾರ ಬಿರಾದಾರ ಅವರನ್ನು ಸನ್ಮಾನಿಸಿದರು. ಶ್ರೀ ಚನ್ನವೀರ ಮಹಾಸ್ವಾಮೀಜಿ, ಸುಭಾಷ ಮಜ್ಜಗಿ, ರಾಜು ಚಂದರವಾಡ, ಧನರಾಜ ರಾಜಮನೆ, ಎಸ್.ಎಸ್. ಮೈನಾಲೆ, ಇತರರಿದ್ದರು. 
ಗದಗ

ತ್ರಿವಿಧ ದಾಸೋಹಕ್ಕೆ ದಾನಿಗಳ ಕೊಡುಗೆ ಅತ್ಯಮೂಲ್ಯ donate

ಪ್ರಮುಖ ಮುಖ್ಯಾಂಶಗಳು

  • ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮೀಜಿ ಆಶೀರ್ವಚನ
ಲಕ್ಷ್ಮೇಶ್ವರ: ಮಠ-ಮಾನ್ಯಗಳು, ಗುರುಕುಲಗಳು ನಡೆಸುವ ಅನ್ನ, ಅಕ್ಷರ ಮತ್ತು ಅಶ್ರಯದ ತ್ರಿವಿಧ ದಾಸೋಹ ಸೇವೆ ನಿರಂತರವಾಗಿ ಸಾಗಲು ದಾನಿಗಳ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮೀಜಿ ಹೇಳಿದರು.
ಸಮೀಪದ ಹೂವಿನಶಿಗ್ಲಿ ಮಠದ ಗುರುಕುಲದ ಮಕ್ಕಳ ನಿತ್ಯದ ದಾಸೋಹಕ್ಕಾಗಿ ಪ್ರತಿ ಆರು ತಿಂಗಳಿಗೊಮ್ಮೆ ಸಕಲ ದಿನಸಿ ಪದಾರ್ಥಗಳನ್ನು ಸ್ವತಃ ತಂದು ತಲುಪಿಸುವ ಕಲಬುರಗಿ ಜಿಲ್ಲೆಯ ಸೋನಾಳದ ವಿಜಯಕುಮಾರ ಬಿರಾದಾರ ಅವರಿಗೆ ಗುರುಕುಲ ಹಾಗೂ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸರ್ಕಾರದ ಅನುದಾನವಿಲ್ಲದೆ ಗುರುಕುಲದ ನೂರಾರು ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆ ನೀಡುವುದು ಸವಾಲಿನ ಕೆಲಸ. ಗ್ರಾಮಸ್ಥರು ಹಾಗೂ ಭಕ್ತರ ಸಹಕಾರ ಇದ್ದರೂ ವಿಜಯಕುಮಾರ ಬಿರಾದಾರ ಅವರಂಥ ದಾನಿಗಳ ನೆರವಿನಿಂದಲೇ ಗುರುಕುಲದ ಸೇವಾ ಪರಂಪರೆ ನಿರಂತರವಾಗಿ ಸಾಗುತ್ತಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಹಲವು ವರ್ಷಗಳಿಂದ 6 ತಿಂಗಳಿಗೊಮ್ಮೆ ಲಕ್ಷಾಂತರ ರೂ. ಮೌಲ್ಯದ ದಿನಸಿ ಸಾಮಗ್ರಿಗಳನ್ನು ತಂದು ಕೊಡುತ್ತಿರುವ ಉದ್ಯಮಿ ವಿಜಯಕುಮಾರ ಸೂರ್ಯಕಾಂತ ಬಿರಾದಾರ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಅವರ ನಿಸ್ವಾರ್ಥ, ಪುಣ್ಯದ ಸೇವೆಗೆ ಶ್ರೀಮಠದ ಆಶೀರ್ವಾದ ಮತ್ತು ಮಕ್ಕಳ ಶುಭ ಹಾರೈಕೆ ಸದಾ ಇರಲಿದೆ. ಭಗವಂತ ಅವರಿಗೆ ಇನ್ನಷ್ಟು ಸಂಪತ್ತು, ಶಕ್ತಿ ನೀಡಲಿ ಎಂದು ಹಾರೈಸಿದರು.
ತಹಸೀಲ್ದಾರ್ ರವಿ ಕೊರಕನವರ ಮಾತನಾಡಿ, ಹೂವಿನಶಿಗ್ಲಿ ಮಠವು ಅನಾಥ ಹಾಗೂ ಬಡ ಮಕ್ಕಳಿಗೆ ಸುಶಿಕ್ಷಣ ಮತ್ತು ಸುಸಂಸ್ಕಾರ ನೀಡುತ್ತಿದೆ. ನೂರಾರು ಮಕ್ಕಳ ದಾಸೋಹಕ್ಕಾಗಿ ವಿಜಯಕುಮಾರ ಬಿರಾದಾರ ಹಲವು ವರ್ಷಗಳಿಂದ ಲಕ್ಷಾಂತರ ರೂ. ಮೌಲ್ಯದ ಗುಣಮಟ್ಟದ ದಿನಸಿ ಸಾಮಗ್ರಿಗಳನ್ನು ನೀಡಿ ಗುರುಕುಲದ ಸೇವಾ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ ಎಂದರು.
ಗುರುಕುಲದ ಆಡಳಿತಾಧಿಕಾರಿ ಆರ್.ಜಿ. ಚಿಕ್ಕಮಠ ಮಾತನಾಡಿ, ಲಿಂ. ನಿರಂಜನ ಜಗದ್ಗುರುಗಳ ಆಶೀರ್ವಾದಿಂದ ವಿಜಯಕುಮಾರ ಅವರಂತಹ ಪರಮ ಶ್ರೇಷ್ಠ ಭಕ್ತರು, ದಾನಿಗಳಿಂದ ಮಠದಲ್ಲಿ ಅನಾಥ, ಬಡ ಮಕ್ಕಳ ಸೇವೆ ಮಾಡಲು ಸಾಧ್ಯವಾಗುತ್ತಿದೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ವಿಜಯಕುಮಾರ ಬಿರಾದಾರ, ಮಕ್ಕಳ ಸೇವೆಯೇ ದೇವರ ಸೇವೆ ಎಂಬ ನಂಬಿಕೆಯಿಂದ ಈ ಕೆಲಸ ಮಾಡುತ್ತಿದ್ದೇನೆ. ಶ್ರೀಮಠವು ಬಡ ಮಕ್ಕಳಿಗಾಗಿ ಮಾಡುತ್ತಿರುವ ಸೇವೆಗೆ ನನ್ನ ಅಳಿಲು ಸೇವೆ ಇದು. ಇದರಿಂದ ಆತ್ಮಸಂತೃಪ್ತಿ ದೊರೆತಿದೆ ಎಂದರು.
ಸುಭಾಷ ಮಜ್ಜಗಿ, ರಾಜು ಚಂದರವಾಡ, ಧನರಾಜ ರಾಜಮನೆ, ಎಸ್.ಎಸ್. ಮೈನಾಲೆ, ಬಿ.ಬಿ. ಹೆಡೆ, ಮಹಾದೇವ ಬಿರಾದಾರ, ಮನೋಜ ಹಿರೇಮಠ, ಆಕಾಶ ಹೊನ್ನಿ, ಆರ್.ಬಿ. ಬನ್ನೂರ, ಚಂದ್ರಕಾಂತ ಘಾಟಗೆ, ಶೈಲಾ ಆದಿ, ಜಯಶ್ರೀ ಮೆಳ್ಳಿಗೇರಿ, ಯೋಗೇಂದ್ರ ಜಂಬಗಿ, ಗುರುಕುಲದ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಮುಖ್ಯೋಪಾಧ್ಯಾಯ ಆರ್.ವಿ. ಬಡಿಗೇರ ನಿರ್ವಹಿಸಿದರು.