ಲಕ್ಷ್ಮೇಶ್ವರದಲ್ಲಿ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಸಭೆಯನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿದರು. ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿಗಳು, ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು, ಡಾ. ವೈಜನಾಥ ಶಿವಾಚಾರ್ಯರು, ಶ್ರೀ ಮಳೆಮಲ್ಲಿಕಾರ್ಜುನ ಸ್ವಾಮೀಜಿ ಇತರರಿದ್ದರು.
- ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಚನ
- ಲಕ್ಷ್ಮೇಶ್ವರ ಹಾಲೇವಾಡಿಮಠದಲ್ಲಿ ರೇಣುಕಾಚಾರ್ಯರ ಯುಗಮಾನೋತ್ಸವ
ಲಕ್ಷ್ಮೇಶ್ವರ: ಸಿರಿತನ ಬಂದಾಗ ಹಿಗ್ಗದೆ, ಬಡತನ ಬಂದಾಗ ಕುಗ್ಗದೆ ಕ್ರಿಯಾಶೀಲರಾಗಿ ಬಾಳುವುದೇ ಜೀವನದ ಗುರಿಯಾಗಬೇಕಾಗಿದೆ. ಹೊರಗಿನ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವುದರ ಜತೆಗೆ ಒಳಗಿರುವ ಅಧ್ಯಾತ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕಿದೆ. ಅಧ್ಯಾತ್ಮ ಸಂಪತ್ತಿನಿಂದ ಜೀವನದಲ್ಲಿ ಸುಖ, ಶಾಂತಿ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಹಾಲೇವಾಡಿಮಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ರಜತ ಮಹೋತ್ಸವ- ಜಯಂತ್ಯುತ್ಸವ ಹಾಗೂ ಮಾತಾ, ಪಿತೃಗಳ ಪುಣ್ಯಸ್ಮರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಸತ್ಯ, ಶುದ್ಧವಾದ ಜೀವನಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆಯ ಅಗತ್ಯವಿದೆ. ಧರ್ಮದ ವೃಕ್ಷ ಬರೀ ವೃಕ್ಷವಲ್ಲ. ಅದೊಂದು ಅದ್ಭುತ ಅಶ್ವತ್ಥ ವೃಕ್ಷ. ಸಮೃದ್ಧಿ ಶಾಂತಿಯ ತಂಗಾಳಿ ನೀಡುವ ಹೆಮ್ಮರ.
ಆಚಾರ್ಯರು ಋಷಿ ಮುನಿಗಳು ಸಾಧು, ಸಂತ, ಮಹಾಂತರು ಜ್ಞಾನ ಸುಧೆಯನ್ನು ಹಂಚುವುದರ ಮೂಲಕ ಇತರರ ಬಾಳು ಬೆಳಗಿಸುತ್ತಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗಪುರುಷರಾಗಿ ಜಾತಿ- ಮತ-ಪಂಥಗಳೆನ್ನದೇ ಸಕಲರ ಏಳಿಗೆಗೆ ಶ್ರಮಿಸಿದ್ದಾರೆ.
ಅವರು ಕೊಟ್ಟ ಸಂದೇಶ, ತೋರಿದ ದಾರಿ ನಮ್ಮೆಲ್ಲರ ಬಾಳಿಗೆ ಬೆಳಕು ತೋರಿವೆ. ಹಾಲೇವಾಡಿಮಠ ಸಹೋದರರು ಸುಂದರ ಮಂದಿರ ನಿರ್ಮಿಸಿ 25 ವರುಷ ತುಂಬಿದ ಸಂದರ್ಭದಲ್ಲಿ ರಜತ ಮಹೋತ್ಸವ ಆಚರಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಆನಂದ ಮೆಕ್ಕಿ ಮಾತನಾಡಿ, ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮಶ್ರದ್ಧೆ ಮತ್ತು ಸದಾಚಾರ ಬೆಳೆದು ಬರಬೇಕಾಗಿದೆ. ಈ ದಿಸೆಯಲ್ಲಿ ಹಾಲೇವಾಡಿಮಠ ಸಹೋದರರ ಕಾರ್ಯ ಸ್ತುತ್ಯರ್ಹ ಎಂದರು.
ಮುಕ್ತಿಮಂದಿರ ಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದುಡಿಮೆಯ ಬದುಕಿನಿಂದ ಉತ್ಕರ್ಷ ಸಾಧ್ಯ. ನಡೆಯುವ ಕಾಲು, ದುಡಿಯುವ ಕೈಗಳು ಇರದಿದ್ದರೆ ಏನೂ ಮಾಡಲಾಗದು. ಅರಮನೆ ಇರಲಿ, ಗುಡಿಸಲೇ ಇರಲಿ, ದುಡಿಯುವುದರಲ್ಲಿ ಉತ್ಸಾಹ ಇದ್ದರೆ ಬದುಕು ಬಲಗೊಳ್ಳುತ್ತದೆ ಎಂದರು. ಬನ್ನಿಕೊಪ್ಪದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು, ಗಂಜೀಗಟ್ಟಿ ಡಾ. ವೈಜನಾಥ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯರು, ಕರೇವಾಡಿಮಠ ಶ್ರೀ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು.
ಶಿವಲಿಂಗಯ್ಯ ಹಾಲೇವಾಡಿಮಠ ಕಾರ್ಯಕ್ರಮ ಸಂಯೋಜಿಸಿದ್ದರು. ಚಂಬಣ್ಣ ಬಾಳಿಕಾಯಿ ಅವರು ಭಾವಚಿತ್ರ ಬಿಡುಗಡೆ ಮಾಡಿದರು.
ಗದಗ ಸರ್ಕಾರಿ ಮಹಿಳಾ ಕಾಲೇಜಿನ ಡಾ. ಸಿದ್ಧಲಿಂಗೇಶ ಸಜ್ಜನಶೆಟ್ರ ಉಪನ್ಯಾಸ ನೀಡಿದರು. ವೀರೇಶ ಕೂಗು, ವಿಜಯ ಮಹಾಂತಶೆಟ್ಟರ, ಕುಬೇರಪ್ಪ ಮಹಾಂತಶೆಟ್ಟರ ಭಾಗವಹಿಸಿದ್ದರು.
ಡಾ. ಎಸ್.ಜಿ. ಹಾಲೇವಾಡಿಮಠ ಸ್ವಾಗತಿಸಿದರು. ಡಾ. ಪ್ರಭುಸ್ವಾಮಿ ಜಿ. ಹಾಲೇವಾಡಿಮಠ ಮಾತನಾಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ನಡೆಯಿತು. ಪಾರ್ವತಿ ಕಳ್ಳಿಮಠ ಪ್ರಾರ್ಥಿಸಿದರು. ಹೊನ್ನತ್ತಿಯ ಬಸವರಾಜ ಹಿರೇಮಠ ಭಕ್ತಿಗೀತೆ ಹಾಡಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.