ನರಗುಂದ ಪಟ್ಟಣದಲ್ಲಿ ಶನಿವಾರ ನಡೆದ ಮಹದಾಯಿ ಹೋರಾಟ ವೇದಿಕೆಯಲ್ಲಿ (Kalasa banduri)ವೀರೇಶಸ್ವಾಮಿ ಸೊಬರದಮಠ ಮಾತನಾಡಿದರು. ಈರಬಸಪ್ಪ ಹೂಗಾರ, ಚಂದ್ರಗೌಡ ಪಾಟೀಲ, ನಂದೀಶ ಮಠದ, ಸಾವಿತ್ರಿ ಸೋಮನಕಟ್ಟಿ, ಇತರರಿದ್ದರು. 
ಗದಗ

Kalasa-Banduri : ಕಾನೂನು ಹೋರಾಟದಿಂದ ಕಳಸಾ-ಬಂಡೂರಿ ಯೋಜನೆ ಜಾರಿ

ನರಗುಂದ: ಕಳಸಾ-ಬಂಡೂರಿ (kalasa-banduri) ಯೋಜನೆಗೆ ರಾಜಕಾರಣಿಗಳ ಇಚ್ಛಾಶಕ್ತಿ ಇಲ್ಲದಿದ್ದರೂ ಪರವಾಗಿಲ್ಲ. ಕಾನೂನಾತ್ಮಕ ಹೋರಾಟದಿಂದಲೇ ಮುಕ್ತಿ ಕಂಡುಕೊಳ್ಳುತ್ತೇವೆ ಎಂದು ರೈತಸೇನಾ ಕರ್ನಾಟಕ ಸಂಘಟನೆ ಅಧ್ಯಕ್ಷ ವೀರೇಶಸ್ವಾಮಿ ಸೊಬರದಮಠ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆದ 3700ನೇ ದಿನದ ಮಹದಾಯಿ ಕಳಸಾ-ಬಂಡೂರಿ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದ ಅವರು, ‘ಬಂಡೂರಿ ನಾಲೆಗೆ ಕೇಂದ್ರ ಅರಣ್ಯ ಪರಿಸರ ಇಲಾಖೆಯಿಂದ ಕೇಳಿರುವ ಎಲ್ಲ ಪ್ರಶ್ನೆಗಳು ಕ್ರಮಬದ್ಧವಾಗಿವೆ. ಮುಂಬರುವ 10 ದಿನಗಳಲ್ಲಿ ಮಹತ್ವದ ಯೋಜನೆಗೆ ಪರವಾನಗಿ ಸಿಗುವ ಒಳ್ಳೆಯ ನಿರೀಕ್ಷೆ ಹೊಂದಿದ್ದೇವೆ’ ಎಂದರು.
ಮಹದಾಯಿ ಕಿರುಹಳ್ಳಕ್ಕೆ ಸಂಬಂಧಿಸಿರುವ ಬಂಡೂರಿ ನಾಲೆ ನಮ್ಮ ರಾಜ್ಯದ ವ್ಯಾಪ್ತಿಯಲ್ಲಿರುವುದರಿಂದ ಅದಕ್ಕೆ ಯಾವುದೇ ರೀತಿಯ ಕಾನೂನಾತ್ಮಕ ತೊಡಕುಗಳಿರಲಿಲ್ಲ. ರಾಜ್ಯ ಸರ್ಕಾರದಿಂದ ಈಗಾಗಲೇ ಅರಣ್ಯ ಪರಿಸರ ಇಲಾಖೆಯಿಂದ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಅಧಿಕೃತ ಪರವಾನಗಿ ನೀಡಲಾಗಿತ್ತು. ಆದರೆ, ಕೇಂದ್ರ ಸರ್ಕಾರದ ಉದ್ಧಟತನ, ಗೋವಾದವರ ಕ್ಷುಲ್ಲಕ ಕಾನೂನಾತ್ಮಕ ಹೋರಾಟ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಅನುಷ್ಠಾನ ವಿಳಂಭವಾಗಿದೆ ಎಂದರು.
ಬಂಡೂರಿ ನಾಲೆಯ 2.18 ಟಿಎಂಸಿ ಕುಡಿಯುವ ನೀರಿನ ಕಾಮಗಾರಿಗೆ ಈಗಾಗಲೇ 764 ಕೋಟಿ 70 ಲಕ್ಷ ರೂಪಾಯಿ ವೆಚ್ಚದ ಡಿಪಿಆರ್ ತಯಾರಿಸಲಾಗಿದೆ. ಕಳಸಾ-ಹಳತಾರ ನಾಲೆಗಳಿಂದ ನ್ಯಾಯಾಧಿಕರಣದಿಂದ ರಾಜ್ಯಕ್ಕೆ 1.72 ಟಿಎಂಸಿ ನೀರು ಹಂಚಿಕೆಯಾಗಿದೆ. ಐದೂವರೆ ಕಿಲೋ ಮೀಟರ್ ಉದ್ದದ ಕಳಸಾ ಕಾಮಗಾರಿಯ ಪೈಕಿ ಈಗಾಗಲೇ ನಾಲ್ಕೂವರೆ ಕಿಲೋ ಮೀಟರ್ ಪೂರ್ಣಗೊಂಡಿದೆ. 
ಇನ್ನುಳಿದ ಕಾಮಗಾರಿಯನ್ನು ಇಂಟರ್‌ಲಿಂಕ್ ಚನಲ್ ಮೂಲಕ ಮಲಪ್ರಭೆ ನದಿಗೆ ನೀರು ಹಿಂದಿರುಗಿಸಿಕೊಳ್ಳುವ ಯೋಜನೆ ರೂಪಿಸಲಾಗಿತ್ತು. ಆದರೆ, ನೀರು ಕೊಡದೆ ಕೇಂದ್ರ ಸರ್ಕಾರದಿಂದ ಮಹದಾಯಿ ನೀರು ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದು ಸರಿಯಲ್ಲ ಎಂದರು.
ಕರ್ನಾಟಕ, ಗೋವಾ, ಮಹಾರಾಷ್ಟ್ರಕ್ಕೆ 2018 ಆಗಸ್ಟ್ 14 ರಂದು ನ್ಯಾಯಾಧೀಕರಣದಿಂದ ನೀರು ಹಂಚಿಕೆ ಮಾಡಿರುವುದನ್ನು ಮೂರು ರಾಜ್ಯಗಳು ಒಪ್ಪಿಕೊಂಡಿವೆ. ಆದರೀಗ ಗೋವಾ ವಿನಾಕಾರಣ ಪದೇಪದೆ ಕಾನೂನಿನ ಮೂಲಕ ಮಹತ್ವದ ಯೋಜನೆಗೆ ತಡೆ ಒಡ್ಡುತ್ತಿರುವುದು ಒಳ್ಳೆಯದಲ್ಲ. ನಮ್ಮ ರಾಜ್ಯದ ಪಾಲಿನ ನೀರನ್ನು ಹಕ್ಕುಬದ್ಧವಾಗಿ ಪಡೆದುಕೊಳ್ಳಲು ಮಹದಾಯಿ ಹೋರಾಟಗಾರರು ಈಗಾಗಲೇ ಶೇ.75 ರಷ್ಟು ಕಾನೂನಾತ್ಮಕ ಗೆಲುವು ಸಾಧಿಸಿದ್ದಾರೆ. ಇನ್ನುಳಿದ ಶೇ.25 ರಷ್ಟು ಹೋರಾಟ ರೈತರು, ಸಾರ್ವಜನಿಕರು,ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅಂತಿಮ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈರಬಸಪ್ಪ ಹೂಗಾರ, ಚಂದ್ರಗೌಡ ಪಾಟೀಲ, ಎಸ್.ಬಿ. ಜೋಗಣ್ಣವರ, ಮಲ್ಲಣ್ಣ ಅಲೇಕಾರ, ಸಾವಿತ್ರಿ ಸೋಮನಕಟ್ಟಿ, ಹೇಮಕ್ಕ ಘಾಳಿ, ಮಹಾನಂದಮ್ಮ ಹಿರೇಮಠ, ನಂದೀಶ ಮಠದ, ಸಿದ್ಧಪ್ಪ ಕರಡಿಗುಡ್ಡ, ಸಿದ್ಧಪ್ಪ ಬೇವೂರ, ಸುಭಾಸ ಗಿರಿಯಣ್ಣವರ, ಹನುಮಂತ ಸರನಾಯ್ಕರ, ಯಲ್ಲಪ್ಪ ಚೆಲುವಣ್ಣವರ, ವಾಸು ಚವ್ಹಾಣ, ಅರ್ಜುನ ಮಾನೆ, ಎಚ್.ಎನ್.ಕೋರಿ, ಅನಸವ್ವ ಶಿಂಧೆ, ನಾಗರತ್ನಾ ಇತರರಿದ್ದರು.