ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ಕಲ್ಯಾಣ ಕಟ್ಟಿದವರು ಪ್ರವಚನ ಮಾಲೆ ಕಾರ್ಯಕ್ರಮದಲ್ಲಿ ಶ್ರೀಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ರಾಜರಾಜೇಶ್ವರ ಶ್ರೀಗಳು, ಆರ್.ಬಿ. ಚಿನಿವಾಲರ, ಮಹಾಂತೇಶ ಹಿರೇಮಠ, ಇತರರಿದ್ದರು. 
ಗದಗ

BASAVANNA: ಶರಣ ಸಂಸ್ಕೃತಿಯ ಅಸ್ಮಿತೆ ಜಗಜ್ಯೋತಿ ಬಸವಣ್ಣ

ಪ್ರಮುಖ ಮುಖ್ಯಾಂಶಗಳು

  • ಶ್ರೀಶಾಂತಲಿಂಗ ಸ್ವಾಮೀಜಿ ಅನಿಸಿಕೆ
  • ಭೈರನಹಟ್ಟಿಯಲ್ಲಿ ಪ್ರವಚನ ಉದ್ಘಾಟನೆ
  • ಬಸವಣ್ಣನವರ ಕಾಯಕ ತತ್ವ ಇಡೀ ಜಗತ್ತಿಗೆ ಮಾದರಿ.
ನರಗುಂದ: ಜಗಜ್ಯೋತಿ ಬಸವಣ್ಣ (BASAVANNA) ಶರಣ ಸಂಸ್ಕೃತಿಯ ಅಸ್ಮಿತೆ. ಅವರ ಸಮ-ಸಮಾಜದ ಪರಿಕಲ್ಪನೆ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಾಧಾರವಾಗಿದೆ ಎಂದು ಶ್ರೀಶಾಂತಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ 1ತಿಂಗಳ ಕಾಲ ನಡೆಯುವ ಕಲ್ಯಾಣ ಕಟ್ಟಿದವರು ವಿಶೇಷ ಪ್ರವಚನ ಮಾಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರು ಧರ್ಮ, ಸಂಸ್ಕೃತಿ, ಸಾಹಿತ್ಯ ಸಮ-ಸಮಾಜಕ್ಕೆ ಹೊಸ ಬಾಷ್ಯ ಬರೆದರು. ಅವರ ಕಾಯಕ ತತ್ವ ಶ್ರೇಷ್ಠತೆ ಇಡೀ ಜಗತ್ತಿಗೆ ಮಾದರಿ. 12ನೇ ಶತಮಾನದಲ್ಲಿ ಬಸವಣ್ಣ ಒಬ್ಬ ಶ್ರೇಷ್ಠ ಸಮಾಜ ಸುಧಾರಕರಾಗಿದ್ದರು. ಅವರ ಸಮಾಜಮುಖಿ ಚಿಂತನೆ, ಸಂದೇಶಗಳು ಪ್ರತಿಯೊಬ್ಬರಿಗೂ ಪ್ರೇರಣೆ. ಶರಣ ಪರಂಪರೆಯಲ್ಲಿ ಯಾವುದೇ ಜಾತಿ ಭೇದ-ಭಾವವಿರಲಿಲ್ಲ. ಗಂಡು-ಹೆಣ್ಣೆಂಬ ತಾರತಮ್ಯ ಇರಲಿಲ್ಲ. ಕಾಯಕದಿಂದಲೇ ಶಕ್ತಿ ಮತ್ತು ಮುಕ್ತಿ ಎಂಬುದು ಶಿವಶರಣರ ಆಶಯವಾಗಿತ್ತು ಎಂದು ತಿಳಿಸಿದರು.
ಪ್ರೊ. ಆರ್.ಬಿ. ಚಿನಿವಾಲರ ಮಾತನಾಡಿ, ಬಸವಣ್ಣನವರು ಮಾನವತೆಯ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ಶರಣರು. ಸಮತಾವಾದವನ್ನು ಒತ್ತಿ ಹಿಡಿದು ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಸುಖ ದೊರೆಯಲೆಂದು ಶ್ರಮಿಸಿದ ಸತ್ಯವಾದಿಗಳು. ಅವರ ವ್ಯಕ್ತಿತ್ವ ಬಹುಮುಖವುಳ್ಳದ್ದಾಗಿದೆ. ನರನು ಶುದ್ಧ ಆಚರಣೆಯಿಂದ, ಸತ್ಯಶುದ್ಧ ಕಾಯಕದಿಂದ ಕೈಲಾಸ ಕಾಣಬಲ್ಲನೆಂಬುದಕ್ಕೆ ಅವರ ಜೀವನವೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ರಾಜರಾಜೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವರ್ತಕ ಕೆ.ಡಿ. ಬಿಜಾಪೂರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ.ಆರ್.ಕೆ. ಐನಾಪೂರ, ಮಹಾಂತೇಶ ಹಿರೇಮಠ ಇತರರಿದ್ದರು.