ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ Annadanishwar ಸಂಸ್ಥಾನಮಠದಲ್ಲಿ ಬುಧವಾರ ಜಗದ್ಗರು ಅನ್ನದಾನೀಶ್ವರ ಮಠದ 2026ನೇ ಸಾಲಿನ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಜಾತ್ರಾ ಸಮಿತಿ ನೂತನ ಪದಾಧಿಕಾರಿಗಳನ್ನು ಶ್ರೀಗಳು ಆಶೀರ್ವದಿಸಿದರು. ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು, ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಡಾ.ಬಿ.ಜಿ. ಜವಳಿ, ಕರಬಸಪ್ಪ ಹಂಚಿನಾಳ, ಆರ್.ಎಲ್. ಪೋಲೀಸ ಪಾಟೀಲ, ಎಸ್.ಬಿ.ಕೆ. ಗೌಡರ ಇತರರಿದ್ದರು.
- ಜ.17ರಿಂದ ಸಮಿತಿಯ ಶತಮಾನೋತ್ಸವ ಸಮಾರಂಭ
- ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾಹಿತಿ
- ಶ್ರೀಮಠದ 8ನೇ ಪೀಠಾಧಿಪತಿ ಜಗದ್ಗುರುಗಳ 100ನೇ ಪುಣ್ಯ ಸ್ಮರಣೋತ್ಸವ
ಮುಂಡರಗಿ: ಜಗದ್ಗುರು ಅನ್ನದಾನೀಶ್ವರ (Annadanishwar) ವಿದ್ಯಾ ಸಮಿತಿ ಶತಮಾನೋತ್ಸವ ಸಮಾರಂಭ 2026ರ ಜ.17ಮತ್ತು 18ರಂದು ಜರುಗಲಿದೆ ಹಾಗೂ 2026ನೇ ಸಾಲಿನ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಕಾರ್ಯಕ್ರಮಗಳು ಜ.19ರಿಂದ 31ರವರೆಗೆ ನಡೆಯಲಿವೆ ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಬುಧವಾರ ಕರೆಯಲಾದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾರಂಭದ ಅಂಗವಾಗಿ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶ್ರೀಮಠದ ಹಳೆಯ ದಾಖಲೆಗಳ ಪ್ರದರ್ಶನ, ನಮ್ಮ ಗ್ರಂಥಗಳ ಕುರಿತು ವಿಚಾರ ಸಂಕಿರಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಲಸಾಗಿದೆ. ಇದೇ ವೇಳೆ ಶ್ರೀಮಠದ 8ನೇ ಪೀಠಾಧಿಪತಿ ಜಗದ್ಗುರುಗಳ 100ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ವಿದ್ದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಶ್ರೀ ಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಜ.19ರಿಂದ ಜಾತ್ರೆಯ ಕಾರ್ಯಕ್ರಮಗಳು ಆರಂಭವಾಗಿ 31ರವರೆಗೆ ನಡೆಯಲಿವೆ. ಶಿಕ್ಷಣ ಇಲ್ಲದ ಕಾಲದಲ್ಲಿ 1924ರಲ್ಲಿ ಜ.ಅ.ವಿದ್ಯಾ ಸಂಸ್ಥೆ ಆರಂಭವಾಗಿ ಈ ಭಾಗದಲ್ಲಿ ಶಿಕ್ಷಣ ನೀಡುವ ಕೆಲಸ ಆರಂಭಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ಕೆಲಸವನ್ನು ಪೂಜ್ಯರು ಮಾಡಿದ್ದಾರೆ. ಜ.17ಮತ್ತು 18ರಂದು ಶತಮಾನೋತ್ಸವ ನಡೆಯಲಿದ್ದು ಎಲ್ಲ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಯಶಸ್ವಿಗೊಳಿಸೋಣ ಎಂದರು.
ಜ.ಅ.ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, ಶತಮಾನೋತ್ಸವ ಸಮಾರಂಭದ ಸವಿನೆನಪಿಗೆ ಪೂಜ್ಯರು ಜ.ಅ.ಪದವಿ ಪೂರ್ವ ಕಾಲೇಜ್ ನೂತನ ಕಟ್ಟಡ ನಿರ್ಮಿಸುತ್ತಿದ್ದು ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಜನಪ್ರತಿನಿಧಿಗಳು, ಗಣ್ಯ ಮಾನ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಜಾತ್ರಾ ಸಮಿತಿ ಅಧ್ಯಕ್ಷರಾಗಿ ಕೈಲಾಸಪತಿ ಹಿರೇಮಠ, ಉಪಾಧ್ಯಕ್ಷರಾಗಿ ಮಹೇಶ ಜಂತ್ಲಿ, ಕಾರ್ಯದರ್ಶಿಯಾಗಿ ಶಿವು ವಾಲಿಕಾರ, ಖಜಾಂಚಿಯಾಗಿ ಆನಂದ ನಾಡಗೌಡ ಅವರನ್ನು ಆಯ್ಕೆ ಮಾಡಲಾಯಿತು. ಕರಬಸಪ್ಪ ಹಂಚಿನಾಳ, ಆರ್.ಎಲ್. ಪೋಲೀಸ ಪಾಟೀಲ, ಎಸ್.ಬಿ.ಕೆ. ಗೌಡರ, ವಿ.ಎಫ್. ಗುಡದಪ್ಪನವರ, ವಿ.ಜೆ. ಹಿರೇಮಠ, ನಾಗೇಶ ಹುಬ್ಬಳ್ಳಿ, ಎಸ್.ಬಿ. ಹಿರೇಮಠ, ಮಂಜುನಾಥ ಇಟಗಿ, ಯು.ಸಿ. ಹಂಪಿಮಠ, ಕುಮಾರ ಬನ್ನಿಕೊಪ್ಪ, ಟಿ.ಬಿ. ದಂಡಿನ, ಹಾಲಯ್ಯ ಹಿರೇಮಠ ಇತರರು ಇದ್ದರು. ನಿವೃತ್ತ ಮುಖ್ಯಶಿಕ್ಷಕ ಎಸ್.ಆರ್. ರಿತ್ತಿ ನಿರೂಪಿಸಿದರು.