ಶಿರಹಟ್ಟಿ ಶ್ರೀ ಜಗದ್ಗುರು ಫಕೀರೇಶ್ವರ ಮಠ. 
ಗದಗ

Rathotsava: ಜ. ಶ್ರೀ ಫಕೀರೇಶ್ವರ ರಥೋತ್ಸವ ಮೇ 1ರಂದು

ಶಿರಹಟ್ಟಿ: ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಯ ಪುಣ್ಯಕ್ಷೇತ್ರ, ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರ ಮಠದ 2026ರ ಸಾಲಿನ ಜಾತ್ರಾ ಮಹೋತ್ಸವಕ್ಕೆ (RATHOTSAVA) ಚಾಲನೆ ದೊರೆತಿದೆ. ಅಕ್ಷತ್ತದಗಿ ಅಮಾವಾಸೆ ಅಂಗವಾಗಿ ಶುಕ್ರವಾರ ತೇರಿನಗಡ್ಡಿ ಹೊರಹಾಕುವ ಕಾರ್ಯ ಜರುಗಿತು.
ಏ. 22ರಂದು ಶ್ರೀ ಜಗದ್ಗುರುಗಳು ಮೆರವಣಿಗೆಯ ಮೂಲಕ ಹರಿಪುರಕ್ಕೆ ಪ್ರಯಾಣ ಬೆಳೆಸುವರು. ಅಂದು ಸಂಜೆ 5 ಗಂಟೆಗೆ ಅದ್ಧೂರಿಯಾಗಿ ತೇರಿನ ಕಳಸಾರೋಹಣ ನೆರವೇರಲಿದೆ. ಏ. 27 ಮತ್ತು 28ರಂದು ಲಕ್ಷ್ಮೇಶ್ವರ ನಗರದಲ್ಲಿ ಭಿಕ್ಷಾ ಕಾರ್ಯಕ್ರಮ ನಡೆಯಲಿದ್ದು, ಏ. 28ರಂದು ಕೋಳಿವಾಡ ಗ್ರಾಮದ ದ್ಯಾಮವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ನಂತರ ಖಾನಾಪುರ ಹಾಗೂ ಹರಿಪುರಗಳಲ್ಲಿ ಭಿಕ್ಷಾ ಕಾರ್ಯಕ್ರಮಗಳು ನಡೆಯಲಿವೆ.
ಮೇ 1ರಂದು ಮಹಾ ರಥೋತ್ಸವ ಜರುಗಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀಗಳು ಹರಿಪುರದಿಂದ ಶಿರಹಟ್ಟಿಗೆ ಪುರ ಪ್ರವೇಶ ಮಾಡಿ, ಉಚ್ಚಾಯ ಎಳೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 5 ಗಂಟೆಗೆ ಭಕ್ತಸಾಗರದ ನಡುವೆ ಭವ್ಯ ರಥೋತ್ಸವ ನೆರವೇರಲಿದ್ದು, ನಂತರ ಧರ್ಮಸಭೆ ಜರುಗಲಿದೆ. ಮೇ 2ರಂದು ಬೆಳಗ್ಗೆ ಗುಡಾರ ಬಿನ್ನಾಯ ಹಾಗೂ ಸಂಜೆ 5 ಗಂಟೆಗೆ ಕಡುಬಿನ ಕಾಳಗ ಮತ್ತು ಧರ್ಮಸಭೆ ನಡೆಯಲಿದೆ. ಮೇ 3ರಂದು ಬೆಳಗ್ಗೆ 10 ಗಂಟೆಯಿಂದ ಭವ್ಯ ಸಂಗೀತ ಕಛೇರಿ ಆಯೋಜಿಸಲಾಗಿದೆ. ಮೇ 6ರಂದು ರಾತ್ರಿ 9:15ಕ್ಕೆ ಶ್ರೀ ಜಗದ್ಗುರುಗಳು ಫಕೀರರ ವೇಷದಲ್ಲಿ ನಗಾರಿ ಖಾನಿಗೆ ದಯಮಾಡಿಸಿ, ಊದು ಹಾಕಿ, ಕುರಾನ್ ಪಠಣ ಮಾಡಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಲಿದ್ದಾರೆ.
ಈ ಮಹಾ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಮಠದ ವತಿಯಿಂದ ಪ್ರಸಾದ ಹಾಗೂ ವಸತಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
"

ನೂತನವಾಗಿ ಶ್ರೀಮಠ ಹೆಚ್ಚಿನ ಸಿಂಗಾರಗೊಂಡಿದ್ದು, ಈ ಬಾರಿ ಭಕ್ತರ ನಂಬಿಕೆಯಂತೆ ಹಾಗೂ ಶ್ರೀ ಮಠದ ಸಂಪ್ರದಾಯಕ್ಕೆ ಬಳಕೆ ಮಾಡಲು ಅರಣ್ಯ ಇಲಾಖೆ ಯಿಂದ ಶ್ರೀಮಠದ ಆನೆಯನ್ನು ಕರೆ ತರಲು ಪ್ರಯತ್ನ ಮಾಡಲಾಗಿದೆ.